Translate

ಶನಿವಾರ, ನವೆಂಬರ್ 19, 2011

ಮಧುಮೇಹ ಕ್ಲಿನಿಕ್‌

ಡಾ| ಸುಧಾ ವಿದ್ಯಾಸಾಗರ್‌
ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆ.ಎಂ.ಸಿ., ಮಣಿಪಾಲ.
ಭಾರತ ದೇಶದಲ್ಲಿ ಮಧುಮೇಹ ರೋಗದವರ ಪ್ರಮಾಣ ಅತ್ಯಧಿಕ ಸಂಖ್ಯೆಯಲ್ಲಿದೆ. ಇದರಲ್ಲಿ ಸುಮಾರು ಶೇಕಡಾ 15%ರಷ್ಟು  ಜನರು ಹೊರರೋಗಿಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧುಮೇಹ ಉಲ್ಬಣಗೊಂಡರೆ, ಅದು ಹೃದಯದ ಮೇಲೆ, ಕಣ್ಣುಗಳ ಮೇಲೆ, ನರಗಳ ಮೇಲೆ ಹಾಗೂ ಮೆದುಳಿನ ಮೇಲೆ  ಶಾಶ್ವತ ಪರಿಣಾಮ ಬೀರಿ, ಇದರಿಂದ ಸಾವು ಕೂಡ ಸಂಭವನೀಯ.

ಕಸ್ತೂರ್ಬಾ ಆಸ್ಪತ್ರೆಯ ಮೆಡಿಸಿನ್‌ ವಿಭಾಗದ ತಜ್ಞ ವೈದ್ಯರು, ಇಲ್ಲಿಯ ಮಧುಮೇಹ ಚಿಕಿತ್ಸಾಲಯದಲ್ಲಿ , ರಕ್ತದಲ್ಲಿನ ಸಕ್ಕರೆ ಅಂಶದ ತುಲನೆ ಮಾಡಿ, ಅದಕ್ಕೆ ಸರಿಪ್ರಮಾಣದ ಔಷಧವನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡುತ್ತಾರೆ.

ಅದೂ ಅಲ್ಲದೆ, ಆಗಾಗ ಉಲ್ಬಣಿಸುವ ಮಧುಮೇಹ ಇರುವ ರೋಗಿಗಳಿಗೆ ಸರಿಯಾದ  ಚಿಕಿತ್ಸೆಯನ್ನು ತಿಳಿಸುವುದಲ್ಲದೆ, ದೇಹದ ಬೇರೆ ಬೇರೆ  ಅಂಗಾಂಗಗಳಿಗೆ  ಮಧುಮೇಹದ ತೀವ್ರತೆ  ಬಾಧಿಸದಂತಿರಲು, ಆ ಅಂಗಾಂಗ  ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ಕೂಡ ಸಲಹೆ ಮಾಡುತ್ತಾರೆ. ಕೇವಲ ಔಷಧಿ ಸೇವನೆಯಿಂದ ಮಧುಮೇಹ ಕೊನೆಗೊಳ್ಳಲಾರದು.
ಪಥ್ಯದಾಯಕ ಆಹಾರ ಸೇವನೆ
ನಿಯತಕಾಲಿಕ ವ್ಯಾಯಾಮದಿಂದ  ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆದುದರಿಂದ, ಪಥ್ಯ ಸಲಹಾ ವೈದ್ಯರುಗಳು ಯಾವ ಸರಿಪ್ರಮಾಣದ ಆಹಾರ ಸೇವನೆ ಮಾಡಬೇಕೆಂದು ತಜ್ಞವೈದ್ಯರ ಸಲಹೆ ಪಡೆದು, ಸರಿಪ್ರಮಾಣದ ಆಹಾರ ಸೇವನೆಗೆ ಸೂಚಿಸುತ್ತಾರೆ ಹಾಗೂ ನಿಯಮಿತ ವ್ಯಾಯಾಮಗಳನ್ನು  ಮಾಡಲು ಸೂಚಿಸುತ್ತಾರೆ.

ಇನ್ನು ಕೆಲವು ರೋಗಿಗಳಿಗೆ ಅವರ ಪಾದಗಳ ಇಂದ್ರಿಯ ಸ್ಪರ್ಶಜ್ಞಾನ ಕಡಿಮೆಯಾಗುವಿಕೆಯ ಬಗ್ಗೆ ಕೂಡ ಮಾಹಿತಿ ನೀಡುತ್ತಾರೆ. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಈ ಮೇಲಿನ ವಿಚಾರಗಳ ಬಗ್ಗೆ  ತಜ್ಞ ವೈದ್ಯರು, ರೋಗ ಚಿಕಿತ್ಸಾ ತಜ್ಞರ ಸಹಕಾರದೊಂದಿಗೆ ಕಾಲಿನ ರಕ್ಷಣೆಯ ಬಗ್ಗೆ ಹಾಗೂ ಮಧುಮೇಹಿಗಳು ಧರಿಸಬೇಕಾದ ಕಾಲಿನ ಚಪ್ಪಲಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾರೆ.

ಇದರೊಂದಿಗೆ, ಮಧುಮೇಹ ರೋಗದವರಿಗೆ  ಕಣ್ಣಿನ ಬಗ್ಗೆ ಕಣ್ಣಿನ ಚಿಕಿತ್ಸಾ  ತಜ್ಞರು, ಮೂತ್ರಪಿಂಡ ಚಿಕಿತ್ಸಾ ತಜ್ಞರ‌ ಸಲಹೆ ಕೂಡ ಆವಶ್ಯಕವಾಗಿರುತ್ತದೆ. ಆದುದರಿಂದ, ಈ ಎಲ್ಲಾ ಸಲಹೆಗಳನ್ನು ಮಧುಮೇಹಿಗಳು ಆಗಾಗ ತೆಗೆದುಕೊಂಡು, ಅದರಂತೆ ಔಷಧಗಳನ್ನು ಸೇವಿಸುವ ಬಗ್ಗೆ, ಹಾಗೂ ದೇಹವನ್ನು  ರೋಗ ಮುಕ್ತಗೊಳಿಸುವ  ಬಗ್ಗೆ ಸಲಹೆ ನೀಡಲಾಗುತ್ತದೆ.

ಈ ರೀತಿಯಾಗಿ ವೈದ್ಯಕೀಯ ತಜ್ಞರು, ಕಣ್ಣಿನ ಚಿಕಿತ್ಸಾ  ತಜ್ಞರು, ಹೃದಯ ಚಿಕಿತ್ಸಾ ತಜ್ಞರು, ಮೂತ್ರಪಿಂಡ ಚಿಕಿತ್ಸಾ ತಜ್ಞರ ಸಹಯೋಗದಿಂದ ಮಧುಮೇಹ ರೋಗಿಗಳಿಗೆ ಉತ್ತಮ  ಜೀವನ ನಡೆಸುವಲ್ಲಿ ಹಾಗೂ ಅವರು ರೋಗದ ತೊಂದರೆಗಳಿಂದ ಹೊರಬಂದು ಉತ್ತಮ ಜೀವನ  ಮಾಡುವಲ್ಲಿ ಈ ವೈದ್ಯರ ತಂಡ ಶ್ರಮಿಸುತ್ತದೆ.
ರಕ್ತದೊತ್ತಡ ಚಿಕಿತ್ಸಾಲಯ
ಇಂದಿನ ದಿನಗಳಲ್ಲಿ ಅಧಿಕ ಹಣಗಳಿಸುವ ಅಭಿಲಾಷೆ ಹಾಗೂ ಅತ್ಯುತ್ತಮ ಜೀವನ ಶೈಲಿಯ ಭರದಲ್ಲಿ, ಒತ್ತಡಗಳು ಮನುಷ್ಯರನ್ನು ರೋಗಗ್ರಸ್ಥರನ್ನಾಗಿಸುತ್ತಿದೆ. ಇದರಲ್ಲಿ ಮಧುಮೇಹ ರೋಗ, ಸ್ಥೂಲಕಾಯ ಅಥವಾ ಬೊಜ್ಜು ಬರುವುದು, ರಕ್ತದೊತ್ತಡ  ರೋಗಗಳು ಪ್ರಾಮುಖ್ಯ. 

ಇವುಗಳಿಂದ ರೋಗ ಉಲ್ಬಣಗೊಳ್ಳುವುದು ಹಾಗೂ ಸಾವು ಕೂಡ ಸಂಭವಿಸುತ್ತದೆ. ನಿಯಂತ್ರಣವಿಲ್ಲದ ರಕ್ತದೊತ್ತಡದಿಂದ ಹೃದಯದ ಕಾಯಿಲೆಗೆ ತುತ್ತಾಗಬಹುದು. ಲಕ್ವಾ ತಗುಲಬಹುದು  ಹಾಗೂ ಅದು ಮೂತ್ರಪಿಂಡದ ವೈಫಲ್ಯಕ್ಕೆ  ಕಾರಣವಾಗಬಹುದು.

ತಜ್ಞವೈದ್ಯರ ತಂಡ ಈ ದಿಸೆಯಲ್ಲಿ  ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸಾಲಯದಲ್ಲಿ ರಕ್ತದೊತ್ತಡದ ನಿಯಂತ್ರಣಕ್ಕೆ ತಕ್ಕುದಾದ ಔಷಧ ನೀಡುವಲ್ಲಿ  ಕಾಳಜಿ  ವಹಿಸುತ್ತಾರೆ.

ಈ ರಕ್ತದೊತ್ತಡದ  ಚಿಕಿತ್ಸಾಲಯದ  ಮುಖ್ಯ ಉದ್ದೇಶ, ರಕ್ತದೊತ್ತಡದಿಂದ ಬಳಲುವ ರೋಗಿಗಳಿಗೆ, ಅವರಿಗೆ ಜೀವನಶೈಲಿಯ ಬಗ್ಗೆ, ಆಹಾರದ ಪ್ರಮಾಣದ ಬಗ್ಗೆ  ಮಾಹಿತಿ  ಹಾಗೂ ಸೂಕ್ತ ವ್ಯಾಯಾಮದ ಬಗ್ಗೆ ಮಾಹಿತಿ-ಸಲಹೆ ನೀಡಿ, ಇದರಿಂದ ರಕ್ತದೊತ್ತಡದ ರೋಗಿಗಳು ಉತ್ತಮ ಜೀವನ ನಡೆಸುವಲ್ಲಿ ಸಹಕರಿಸುವುದಾಗಿದೆ.
ದೀರ್ಘ‌ಕಾಲಿಕ ಶ್ವಾಸಕೋಶ ಸಂಬಂಧಿ ರೋಗಗಳು
ಜಗತ್ತಿನಲ್ಲಿ  ಶ್ವಾಸಕೋಶದ ಕಾಯಿಲೆಯಿಂದ ಬಳಲುವವರ ಸಂಖ್ಯೆ ರೋಗಗಳಲ್ಲಿ  ನಾಲ್ಕನೆಯ ಸ್ಥಾನದಲ್ಲಿದೆ . ಈ ಕಾಯಿಲೆ  ಸಾಮಾನ್ಯವಾಗಿ ಹೊಗೆಬತ್ತಿ ಸೇದುವವರಿಗೆ ಬರುವಂತಹ ರೋಗವಾಗಿದೆ. ಬಹಳ ಕಾಲದಿಂದಲೂ ಹೊಗೆಬತ್ತಿ ಸೇದುತ್ತಿರುವವರಲ್ಲಿ, ಅವರ ಶ್ವಾಸಕೋಶದಲ್ಲಿ  ಕಫ ತುಂಬತೊಡಗಿದಾಗ  ಉಸಿರಾಟದ ತೊಂದರೆ ಬರುತ್ತದೆ.

ಈ ಶ್ವಾಸಕೋಶದ ಕಾಯಿಲೆಗೆ  ವೈದ್ಯಕೀಯ ತಜ್ಞರಿಂದ ಚಿಕಿತ್ಸೆ ಅಲ್ಲದೆ, ಜೊತೆಗೆ ಪೌಷ್ಟಿಕ ಆಹಾರ ಸೇವನೆಯಿಂದ ಉಪಶಮನ  ಸಾಧ್ಯ. ಶ್ವಾಸಕೋಶದ ಚಿಕಿತ್ಸೆ, ಆಮ್ಲಜನಕ  ನೀಡುವುದು  ಹಾಗೂ ಅದರ ಬಗ್ಗೆ ಅರಿವು ಮೂಡಿಸುವುದು  ಹಾಗೂ  ಈ ರೋಗದ ಬಗ್ಗೆ  ತಿಳಿವಳಿಕೆ  ಮೂಡಿಸುವುದು ಕೂಡ ಮುಖ್ಯವಾಗಿದೆ.

ಹೆಚ್ಚಿನ ರೋಗಿಗಳಿಗೆ ಹೊಗೆಬತ್ತಿ ಸೇದುವುದನ್ನು  ಮಾನಸಿಕ ತಜ್ಞರ ಸಲಹೆಯ ಮೂಲಕ ನಿಲ್ಲಿಸುವುದು ಅಗತ್ಯ ಬೀಳುತ್ತದೆ ಹಾಗೂ  ಶ್ವಾಸಕೋಶದ ಚಿಕಿತ್ಸೆ ಹಾಗೂ ಶೀತ ಶ್ಲೇಷ್ಮ ಜ್ವರದ ಚುಚ್ಚುಮದ್ದು ಕೊಡುವುದರಿಂದ ಪದೇಪದೇ  ಆಸ್ಪತ್ರೆಗೆ ಭರ್ತಿಯಾಗುವುದನ್ನು  ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು.
ಬೊಜ್ಜು  ನಿವಾರಣಾ ಚಿಕಿತ್ಸಾಲಯ
ಅತ್ಯಧಿಕ ದೇಹದ ತೂಕದ  ಪರಿಣಾಮವಾಗಿ  ಹಲವು ತರಹದ ಆರೋಗ್ಯ ತೊಂದರೆಗಳು  ಉದ್ಬವಿಸಿ,  ಹಲವು ರೋಗಕ್ಕೆ ತುತ್ತಾಗುವ ಸಂಭವ ಹಾಗೂ  ಜೀವನ ಗುಣಮಟ್ಟ  ಕುಂದುವ ಸಂಭವ ಹೆಚ್ಚು. ದೇಹದ ತೂಕ ಪ್ರಮಾಣವನ್ನು ಸಮಯೋಚಿತವಾಗಿ ಮಾಡಿಕೊಂಡು, ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದರಿಂದ  ದೀರ್ಘ‌ಕಾಲದ ಕಾಯಿಲೆಗಳು  ಬಾರದಂತೆ ತಡೆಗಟ್ಟಬಹುದು.

ಈ ಕಾರಣಕ್ಕಾಗಿ,  ಮಣಿಪಾಲ  ಬೊಜ್ಜು  ನಿವಾರಣ ಹಾಗೂ ಜೀವನ ನಿರ್ವಹಣಾ  ಚಿಕಿತ್ಸಾ  ಕೇಂದ್ರವನ್ನು  ಸ್ಥಾಪಿಸಲಾಗಿದೆ. ಈ ಚಿಕಿತ್ಸಾ ಕೇಂದ್ರದಲ್ಲಿ ತಜ್ಞ ವೈದ್ಯರು, ಪಥ್ಯಾಹಾರ  ತಜ್ಞರ ತಂಡವು  ಬೊಜ್ಜು ನಿವಾರಣೆ ಹಾಗೂ ದೇಹ ನಿರ್ವಹಣೆಗೆ ಸಹಕರಿಸಲು ಹಾಗೂ ಬೊಜ್ಜು ರೋಗದಿಂದ ಮುಕ್ತಿಗೆ ಸಹಕರಿಸಲು ಸಜ್ಜಾಗಿದೆ.
ಥೈರಾಯ್ಡ  ತೊಂದರೆ
ಥೈರಾಯ್ಡ ಗ್ರಂಥಿಯ ಸ್ರಾವಗಳಲ್ಲಿ  ವ್ಯತ್ಯಯ ಭಾರತದಲ್ಲಿ ಅತಿಸಾಮಾನ್ಯವಾದ ಗ್ರಂಥಿಗಳ ತೊಂದರೆಯ ರೋಗ.  ಗ್ರಂಥಿಗಳಲ್ಲಿ ಅಸಹಜವಾಗಿ ಹೆಚ್ಚು ಸ್ರವಿಸುವಿಕೆಯಿಂದ ಥೈರಾಯ್ಡ ಗ್ರಂಥಿಯ ಬಲ ಕ್ಷೀಣಿಸುತ್ತದೆ, ಇದರಿಂದ ರೋಗಿಗಳಿಗೆ  ತುಂಬಾ ತೊಂದರೆಯಾಗಿ, ಇದು ಮಾರಣಾಂತಿಕವಾಗಿ ಕೂಡ ಪರಿಣಮಿಸಬಹುದು.

ಇದರಿಂದ ಥೈರಾಯ್ಡ ಗ್ರಂಥಿಯ ಚಾಲನೆ  ಸರಿಯಾಗಿ ಇಡುವ ಸಲಹೆ ನೀಡುವ, ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಥೈರಾಯ್ಡ ಗ್ರಂಥಿ ಚಿಕಿತ್ಸಾಲಯವು ಕೂಡ ಇಲ್ಲಿ ಸದ್ಯದಲ್ಲೇ ಸ್ಥಾಪನೆಯಾಗಲಿದೆ.
ಎಚ್‌.ಐ.ವಿ
ಇದು  ಹರಡುವ ಕಾಯಿಲೆಯಾಗಿದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ  ಎಚ್‌. ಐ.ವಿ. ಚಿಕಿತ್ಸಾಲಯವನ್ನು  2 ವಾರಗಳಿಗೊಮ್ಮೆ  ನಡೆಸಲಾಗುತ್ತದೆ. ಈ ಚಿಕಿತ್ಸಾಲಯದಲ್ಲಿ ಎಚ್‌. ಐ. ವಿ. ಬಾಧಿತ ರೋಗಿಗಳಿಗೆ ವೈದ್ಯಕೀಯ ಸಲಹೆ, ಅರಿವು,ಇದರಿಂದಾಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಹಾಗೂ ಕಳಕಳಿಗಳ ಬಗ್ಗೆ ತಿಳಿಹೇಳಲಾಗುತ್ತದೆ.

ಎಚ್‌.ಐ.ವಿ. ಬಾಧಿತ ರೋಗಿಗಳಿಗೆ ಆರೈಕೆ ಕೊಡುವುದಲ್ಲದೆ, ಇದರ ನಿವಾರಣೆಗೆ ಸಲಹೆಗಳನ್ನೂ ನೀಡಲಾಗುತ್ತದೆ. ಇದರ ಸಹಾಯಕ ಸಂಘವು, ಈ ಎಚ್‌ ಐವಿ ರೋಗಿಗಳಿಗೆ, ಅವರ ಕುಟುಂಬದವರಿಗೆ ನೈತಿಕ ಸಹಕಾರ, ಸಲಹೆ ನೀಡುತ್ತಿರುತ್ತದೆ.
ಮುಪ್ಪು, ವೈದ್ಯಶಾಸ್ತ್ರ  ಚಿಕಿತ್ಸಾಲಯ
ಹೆಚ್ಚಿನ ಮುದುಕರಿಗೆ ಆರೋಗ್ಯ ರಕ್ಷಣೆಯ ಸೌಲಭ್ಯದ ಅಗತ್ಯ ಇದೆ. ಇಂತಹ ಮುಪ್ಪಿನವರಿಗೆ ಮುಪ್ಪಿನ ತೊಂದರೆಗಳಾದ ಮಧುಮೇಹ, ರಕ್ತದೊತ್ತಡ, ಮಾನಸಿಕ ತೊಂದರೆ, ಗಂಟು ಬೇನೆ ಹಾಗೂ ಇನ್ನಿತರ ಚಲಿಸುವ ಹಾಗೂ ಅನಾರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುತ್ತವೆೆ.

ಇವರ ಆರೋಗ್ಯ ರಕ್ಷಣೆಗೆ ನುರಿತ ವೈದ್ಯತಜ್ಞರ ಹಲವು ವಿಧದ ಸೇವೆಗಳಿವೆ. ಈ ದಿಸೆಯಲ್ಲಿ ಮುದುಕರಿಗೆ, ಹಿರಿಯರಿಗೆ ಸಮಗ್ರ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮುಪ್ಪು ವೈದ್ಯಶಾಸ್ತ್ರ ಚಿಕಿತ್ಸಾಲಯ ವಿಭಾಗವು ಮಾನಸಿಕ ಆರೋಗ್ಯ ಸಂಬಂಧದ ವಿಭಾಗದ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ.
ಕೈಕಾಲು ಗಂಟು ರೋಗ ನಿವಾರಣಾ ಕೇಂದ್ರ
ಈ ಚಿಕಿತ್ಸಾಲಯದ ಉದ್ದೇಶ, ರೋಗಿಗಳನ್ನು ಸಮಗ್ರವಾಗಿ ಪರೀಕ್ಷಿಸಿ, ಗಂಟುಬೇನೆ ಯಂತಹ ತೊಂದರೆಗಳ ನಿವಾರಣೆ ಮಾಡುವುದು. ಈ ರೋಗಕ್ಕೆ ನಿರಂತರ ಚಿಕಿತ್ಸೆ ಹಾಗೂ ತಜ್ಞ ವೈದ್ಯರ ಸಹಕಾರ ಅಗತ್ಯವಿರುವುದರಿಂದ, ಇದನ್ನು ಒದಗಿಸುವುದು ಹಾಗೂ ಇದಕ್ಕೆ ಹೊಂದಿಕೊಂಡು ಬೇರೆ ಚಿಕಿತ್ಸೆ ಸೇವೆಗಳನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಬರುವ ರೋಗಿಗಳಿಗೆ ನೀಡಿ, ಉತ್ತಮ ಜೀವನ ನಡೆಸುವಲ್ಲಿ ಈ ಚಿಕಿತ್ಸಾಲಯ ಸಹಕರಿಸುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಸುಧಾ ವಿದ್ಯಾಸಾಗರ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಮೂಳೆಗಳ ಸಂಧಿವಾತ ಎಂದರೇನು?

ಡಾ| ಪ್ರದೀಪ್‌ ಕುಮಾರ್‌ ಶೆಣೈ ಸಿ., ಕನ್ಸಲ್ಟೆಂಟ್‌ ರೂಮಟಾಲಜಿಸ್ಟ್‌, ಕೆ.ಎಂ.ಸಿ., ಮಂಗಳೂರು.
ಮೂಳೆಗಳ ಸಂಧಿವಾತ ಎಂದರೇನು?
ಸಂಧಿಗಳ ಮೂಳೆಗಳ ನಡುವಿರುವ ಮೃದ್ವಸ್ಥಿಗಳು ಹಾನಿಗೊಳ್ಳುವುದರಿಂದ ಸಂಧಿಗಳಲ್ಲಿ ನೋವು ಉಂಟಾಗುವ ಸ್ಥಿತಿಯನ್ನು ಸಂಧಿವಾತ ಎನ್ನುತ್ತಾರೆ. ಸಂಧಿಗಳ ಎರಡು ಮೂಳೆಗಳ ನಡುವಿರುವ ರಚನೆಗೆ ಮೃದ್ವಸ್ಥಿ ಎಂದು ಹೆಸರು. ಎಲ್ಲಾ ಸಂಧಿಗಳ ನಡುವೆಯೂ ಮೃದ್ವಸ್ಥಿ ಇರುವುದಿಲ್ಲ.
ನನಗೆ ಮೂಳೆಗಳ ಸಂಧಿವಾತದ ತೊಂದರೆ ಇದೆ ಎಂದು ನಾನು ತಿಳಿದುಕೊಳ್ಳುವುದು ಹೇಗೆ?

ನಿಮ್ಮ ಮೂಳೆಗಳ ಸಂಧಿಗಳಲ್ಲಿ ಕ್ರಮೇಣ ಹೆಚ್ಚಾಗುತ್ತಿರುವ ನೋವಿನ ಅನುಭವ ಆಗುತ್ತಿದ್ದರೆ (ಸಾಮಾನ್ಯವಾಗಿ ಮೊಣಕಾಲಿನ ಸಂಧಿಗಳಲ್ಲಿ), ಆರಂಭದಲ್ಲಿ ಮೆಟ್ಟಲುಗಳನ್ನು ಹತ್ತುವಾಗ ಹೆಚ್ಚುತ್ತಾ ಹೋಗುವ ಈ ನೋವು, ಅನಂತರ ಸಮತಲದ ನೆಲದ ಮೇಲೆ ನಡೆದಾಡುವಾಗಲೂ ಬಾಧಿಸುತ್ತಿದ್ದªರೆ, ನೀವು ಮೂಳೆಗಳ ಸಂಧಿವಾತದಿಂದ ಬಳಲುತ್ತಿರುವಿರಿ ಎಂದು ತಿಳಿಯಬಹುದು.

ಮೂಳೆಗಳ ಸಂಧಿವಾತವು ಯಾವುದೇ ಸಂಧಿಯನ್ನು ಬೇಕಾದರೂ ಬಾಧಿಸಬಹುದು. ಆದರೆ, ಮೊಣಕಾಲಿನ ಸಂಧಿಗಳನ್ನು ಬಾಧಿಸುವ ಸಂಧಿವಾತವು ಹೆಚ್ಚು ವೈಕಲ್ಯತೆಯನ್ನು ಉಂಟು ಮಾಡುತ್ತದೆ. ಹಾಗಾಗಿ, ಮೊಣಕಾಲಿನ ಸಂಧಿ ವಾತಕ್ಕಾಗಿ ಬಹಳಷ್ಟು ಜನ ರೋಗಿಗಳು ವೈದ್ಯರನ್ನು ಭೇಟಿಯಾಗುತ್ತಿದ್ದಾರೆ.

ಕೈಗಳ ಬೆರಳಿನ ಸಂಧಿವಾತ ಇದ್ದಾಗ, ಬೆರಳುಗಳ ಗಂಟುಗಳು ಬಾತುಕೊಳ್ಳುತ್ತವೆ. ಆದರೆ ಇಲ್ಲಿ ಅಷ್ಟೇನೂ ನೋವು ಇರುವುದಿಲ್ಲ. ಹಾಗಾಗಿ, ಈ ಸಂಧಿವಾತದಲ್ಲಿ ರೋಗಿಗಳು ನೋವಿಗಿಂತಲೂ ಹೆಚ್ಚಾಗಿ, ಬಾತುಕೊಂಡಿರುವುದರ ಉಪಶಮನಕ್ಕಾಗಿ ಅಥವಾ ಬೆರಳಿನ ಆಕಾರವನ್ನು ಮತ್ತೆ ಮೊದಲಿನಂತಾಗಿಸುವ ಕಾರಣಕ್ಕಾಗಿ ವೈದ್ಯರನ್ನು ಕಾಣುತ್ತಾರೆ.

ನಾವು ಕೆಳಗಿನ ಬರಹದಲ್ಲಿ ಮೊಣಕಾಲು ಹಾಗೂ ಸೊಂಟದ ಸಂಧಿವಾತದ ಕುರಿತಾಗಿ ಚರ್ಚಿಸಲಿದ್ದೇವೆ. ಯಾಕೆಂದರೆ, ಈ ಸಂಧಿವಾತವು ಇನ್ನಾವುದೇ ರೀತಿಯ ಸಂಧಿವಾತಕ್ಕಿಂತಲೂ ರೋಗಿಗಳಲ್ಲಿ  ಹೆಚ್ಚು ವೈಕಲ್ಯತೆಯನ್ನುಂಟು ಮಾಡುವ ಹಾಗೂ ಹೆಚ್ಚು ನೋವುಂಟು ಮಾಡುವ ಸಂಧಿವಾತವಾಗಿದೆ.
ಸಂಧಿವಾತದಲ್ಲಿ ನೋವು ಯಾಕೆ ಬಾಧಿಸುತ್ತದೆ?
ಸಂಧಿಯ ಮೂಳೆಗಳ ಮಧ್ಯದ ಮೃದ್ವಸ್ಥಿಗೆ ಹಾನಿ ಉಂಟಾದಾಗ, ಸಂಧಿಯ ಜೋಡಣೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ ಹಾಗೂ ಈ ವ್ಯತ್ಯಾಸದಿಂದಾಗಿ ಸಂಧಿಯ ಸುತ್ತಲಿನ ಸ್ನಾಯು ಇತ್ಯಾದಿ ರಚನೆಗಳಲ್ಲಿ ಒತ್ತಡ ಉಂಟಾಗುತ್ತದೆ. ಮಾತ್ರವಲ್ಲ, ಮೂಳೆಗೆ ಅಂಟಿರುವ ಮೃದ್ವಸ್ಥಿಯು ಹೊರ ಚಾಚಿಕೊಂಡ ಸ್ಥಿತಿಯಲ್ಲಿ ಆ ಸಂಧಿಯ ಮೇಲೆ ಭಾರ ಬಿದ್ದಾಗ ನೋವು ಉಂಟಾಗುತ್ತದೆ.
ಮೂಳೆಗಳ ಸಂಧಿವಾತ ಉಂಟಾಗಲು ಇರುವ ಪೂರಕ ಅಂಶಗಳು ಯಾವುವು?
ಮೂಳೆಗಳ ಸಂಧಿವಾತ ಉಂಟಾಗಲು ಇರುವ ಪ್ರಬಲ ಅಪಾಯ ಪೂರಕ ಕಾರಣ ಅಂದರೆ ವಯಸ್ಸು. ಪುರುಷರಿಗಿಂತಲೂ ಮಹಿಳೆಯರಲ್ಲಿ ಸಂಧಿವಾತ ಉಂಟಾಗುವ ಸಾಧ್ಯತೆಗಳು ಹೆಚ್ಚು. ಮಾತ್ರವಲ್ಲ, ತೀವ್ರತೆಯೂ ಹೆಚ್ಚು. ಮಹಿಳೆಯರ ಋತುಬಂಧದ ಸಮಯದಲ್ಲಿ  ಸಂಧಿವಾತವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತದೆ.

ಸುಮಾರು 65%ದಷ್ಟು ಸಂಧಿವಾತಗಳು ಆನುವಂಶಿಕ ಮೂಲದ್ದಾಗಿರುತ್ತವೆ. ಲಿಂಗ, ದೇಹದ ಬೊಜ್ಜು ಹಾಗೂ ಸಂಧಿಗಳ ಜೋಡಣಾ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳಿಂದಾಗಿ ಕಾಯಿಲೆಯ ತೀವ್ರತೆಯಲ್ಲಿ ವ್ಯತ್ಯಾಸಗಳಾಗಬಹುದು. ಸೊಂಟದ ಸಂಧಿವಾತಕ್ಕೂ ದೇಹದ ಬೊಜ್ಜಿಗೂ ನೇರವಾದ ಸಂಬಂಧವಿರದಿದ್ದರೂ, ಮೊಣಕಾಲಿನ ಸಂಧಿವಾತಕ್ಕೂ ದೇಹದ ಬೊಜ್ಜಿಗೂ ನೇರ ಸಂಬಂಧವಿದೆ.

ಮಹಿಳೆ ಹಾಗೂ ಪುರುಷರಲ್ಲಿ ಬೊಜ್ಜು ಮೊಣಕಾಲಿನ ಸಂಧಿವಾತದ ಮೇಲೆ ಉಂಟು ಮಾಡುವ ಪರಿಣಾಮಗಳಲ್ಲೂ ವ್ಯತ್ಯಾಸಗಳಿವೆ.
ಮೊಣಕಾಲಿನ ಸಂಧಿವಾತ ಉಂಟಾಗಲು ಹಾಗೂ ತೀವ್ರವಾಗುವಲ್ಲಿ  ಸೇವಿಸುವ ಆಹಾರದ ಪಾತ್ರ ಏನಾದರೂ ಇದೆಯೇ?
ಆಹಾರದಲ್ಲಿ ವಿಟಮಿನ್‌ ಎ, ವಿಟಮಿನ್‌ ಸಿ ಹಾಗೂ ವಿಟಮಿನ್‌ ಡಿ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಮೊಣಕಾಲಿನ ಸಂಧಿವಾತ ಉಂಟಾಗುವ ಅಪಾಯವನ್ನು ಕಡಿಮೆಗೊಳಿಸಬಹುದು. ಆದರೆ ಪ್ರಸ್ತುತ ತೀವ್ರ ಹಂತದಲ್ಲಿ ಇರುವ ಮೊಣಕಾಲಿನ ಸಂಧಿವಾತದ ಮೇಲೆ ಇದರಿಂದ ಹೆಚ್ಚು ಪ್ರಯೋಜನವಾಗದು.
ದೈಹಿಕ ಚಟುವಟಿಕೆಗೂ ಸಂಧಿವಾತಕ್ಕೂ  ಸಂಬಂಧವಿದೆಯೇ?
ಮೂಳೆಗಳ ಸಂಧಿಗಳಿಗೆ ಹಾನಿಯಾಗದಂತೆ ತೊಡಗುವ ದೈಹಿಕ ಚಟುವಟಿಕೆಗಳಿಂದ ಸಂಧಿವಾತ ಉಂಟಾಗುವ ಅಪಾಯವಿಲ್ಲ. ಆದರೆ, ದೈಹಿಕ ಚಟುವಟಿಕೆಗಳಿಂದ ಮೂಳೆಗಳ ರಚನೆಗೆ, ಅದರಲ್ಲೂ ಸಂಧಿಗಳ ಜೋಡಣೆಯ ರಚನೆಗೆ ಹಾನಿಯಾದರೆ ಭವಿಷ್ಯದಲ್ಲಿ ಸಂಧಿವಾತ ಉಂಟಾಗುವ ಅಪಾಯ ಹೆಚ್ಚು.
ಮಾಡುವ ವೃತ್ತಿಗೂ ಸಂಧಿವಾತಕ್ಕೂ ಸಂಬಂಧವಿದೆಯೇ?
ದೈಹಿಕ ಕ್ಷಮತೆಯನ್ನು ಆಧರಿಸಿ, ವೃತ್ತಿಗೂ ಸೊಂಟ ಹಾಗೂ ಮೊಣಕಾಲಿನ ಸಂಧಿವಾತಗಳಿಗೂ ಸಂಬಂಧವಿದೆ.

ಹೆಚ್ಚು ದೈಹಿಕ ಕ್ಷಮತೆಯನ್ನು ಬಯಸುವ, ಮತ್ತೆ ಮತ್ತೆ ಮೊಣಕಾಲನ್ನು ಬಗ್ಗಿಸುವ ಹಾಗೂ ಕುಕ್ಕರುಗಾಲಲ್ಲಿ ಕೂರುವ ವೃತ್ತಿಗಳಿಂದ ಮೊಣಕಾಲಿನ ಸಂಧಿವಾತ ಉಂಟಾಗುವ ಸಾಧ್ಯತೆ ಇದೆ. ರೈತರಿಗೆ, ತುಂಬ ಸಮಯ ನಿಂತೇ ಇರುವ ಕೆಲಸ ಮಾಡುವವರಿಗೆ ಹಾಗೂ ಭಾರ ಎತ್ತುವವರಿಗೆ ಸೊಂಟದ ಸಂಧಿವಾತ ಉಂಟಾಗುವ ಅಪಾಯ ಹೆಚ್ಚು.
ನಡೆಯುವಾಗ ನನ್ನ ಮೂಳೆಯ ಸಂಧಿಗಳಲ್ಲಿ ಶಬ್ದ ಕೇಳಿಸುತ್ತದೆ. ಇದರಿಂದ ತೊಂದರೆ ಇದೆಯೇ?
ನಡೆಯವಾಗ ಕಾಲಿನ ಸಂಧಿ ಗಳಲ್ಲಿ ಶಬ್ದ ಕೇಳಿಸುವುದು ಅಥವಾ ಆ ರೀತಿ ಅನ್ನಿಸುವುದು ಸಂಧಿ ವಾತದ ಒಂದು ಲಕ್ಷಣ. ಮೂಳೆ ಸಂಧಿಗಳು ಆರೋಗ್ಯವಾಗಿರುವ ಮನುಷ್ಯರಲ್ಲಿಯೂ ಈ ರೀತಿಯ ಶಬ್ದ  ಕೇಳಿಸಬಹುದು. ಆದರೆ ನಡೆಯುವಾಗ ಸಂಧಿಗಳಲ್ಲಿ ಶಬ್ದ ಕೇಳಿಸುವ ಜೊತೆಗೆ ನೋವೂ ಇದ್ದರೆ, ಆಗ ವೈದ್ಯಕೀಯ ತಪಾಸಣೆ ಅಗತ್ಯ.
ನನಗೆ ಮೊಣಕಾಲಿನ ಸಂಧಿವಾತ ಇದ್ದಲ್ಲಿ, ನನ್ನ ಜೀವನ ಶೈಲಿಯಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆ?
ಹೌದು. ನಿಮ್ಮ ದೇಹದ ತೂಕವನ್ನು ಎಷ್ಟು ಕಡಿಮೆ ಮಾಡಿಕೊಳ್ಳಲು ಸಾಧ್ಯ ಇದೆಯೋ, ಅಷ್ಟು ಕಡಿಮೆ ಮಾಡಿಕೊಳ್ಳಿ. ದೇಹದ ತೂಕವನ್ನು  ಇಳಿಸಿಕೊಳ್ಳುವುದು ಬಹಳ ಅಗತ್ಯ. ಏಕೆಂದರೆ, ನೀವು 250-300 ಸಲ ಕುಳಿತಲ್ಲಿಂದ ಏಳುವಾಗ, ಅಥವಾ ಕುಕ್ಕರುಗಾಲಲ್ಲಿ ಕೂತಲ್ಲಿಂದ ಏಳುವಾಗ ನಿಮ್ಮ ಇಡೀ ದೇಹದ ತೂಕವು ಮೊಣಕಾಲಿಗೆ ವರ್ಗಾವಣೆಯಾಗುತ್ತದೆ. ಇದರಿಂದ ಮೊಣಕಾಲಿಗೆ ಬಹಳ ಭಾರ ಬೀಳುತ್ತದೆ.

ಹಾಗಾಗಿ, ನೀವು ಒಂದೆರಡು ಕಿಲೋದಷ್ಟು ತೂಕವನ್ನು ಇಳಿಸಿಕೊಂಡರೂ ಸಹ, ನಿಮ್ಮ ಮೊಣಕಾಲಿನ ಕಾಯಿಲೆಯ ತೀವ್ರತೆಯನ್ನು ತಗ್ಗಿಸಿಕೊಳ್ಳಲು ಅದು ಬಹಳ ಸಹಕಾರಿಯಾಗಬಹುದು.

ನಿಮಗೆ ಮೊಣಕಾಲಿನ ಸಂಧಿ ವಾತ ಇರುವ ಕಾರಣ ಕುಕ್ಕರು ಗಾಲು ಕೂರುವ ಭಾರತೀಯ ಟಾಯ್ಲೆಟನ್ನು ಉಪಯೋಗಿಸಬೇಡಿ; ಯುರೋಪಿಯನ್‌ ಮಾದರಿಯ ಟಾಯ್ಲೆಟನ್ನೇ ಉಪಯೋಗಿಸಿ. ಮೆಟ್ಟಲು ಗಳನ್ನು ಹತ್ತ ಬೇಡಿ. ಆದಷ್ಟು ಲಿಫ್ಟನ್ನೇ ಉಪಯೋಗಿಸಿ. ಪೂಜೆ, ನಮಾಜ್‌ ಇತ್ಯಾದಿಗಳನ್ನು ನೆಲದಲ್ಲಿ ಕುಳಿತು ಮಾಡದಿರಿ. ಈ ಎಲ್ಲ ಕ್ರಮಗಳು ನಿಮ್ಮ ಮೊಣಕಾಲಿನ ಮೇಲೆ ಬೀಳುವ ಒತ್ತಡ ಕಡಿಮೆಗೊಳಿಸಲು ಸಹಾಯಕ.

ಸೊಂಟದ ಸಂಧಿವಾತ ಇರುವ ರೋಗಿಗಳು, ಆಧರಿಸಲು ಹಾಗೂ ನೋವನ್ನು ಶಮನಗೊಳಿಸಲು  ಊರುಗೋಲನ್ನು ಉಪಯೋಗಿಸ ಬಹುದು. ಯಾವ ಬದಿಯ ಸೊಂಟ ನೋವು ಇದೆಯೋ, ಅದರ ವಿರುದ್ಧ ದಿಕ್ಕಿನ ಕೈಯಲ್ಲಿ ಕೋಲನ್ನು ಹಿಡಿಯಬೇಕು; ತೊಂದರೆ ಇರುವ ಕಾಲನ್ನು ಮುಂದಿಟ್ಟು ಹೆಜ್ಜೆ ಹಾಕಬೇಕು.
ಸೊಂಟ ಹಾಗೂ ಮೊಣಕಾಲಿನ ಸಂಧಿವಾತವನ್ನು ನಿರ್ವಹಣೆ ಮಾಡಲು ಯಾವುದಾದರೂ ವ್ಯಾಯಾಮಗಳಿವೆಯೇ?
ಹೌದು. ವ್ಯಾಯಾಮ ಚಿಕಿತ್ಸೆಯು ನೋವನ್ನು ಕಡಿಮೆಗೊಳಿಸಿ ಚಲನವಲನಗಳನ್ನು ಉತ್ತಮಗೊಳಿಸುತ್ತದೆ. ವ್ಯಾಯಾಮ ಚಿಕಿತ್ಸೆಯು ಸೊಂಟಕ್ಕಿಂತಲೂ ಮೊಣಕಾಲಿನ ಸಂಧಿವಾತದಲ್ಲಿ ಹೆಚ್ಚು ಸಹಾಯಕವಾಗುತ್ತದೆ.
ಮೊಣಕಾಲಿನ ಸಂಧಿವಾತವು ಪದೇ ಪದೇ ಹಾಗೂ ಕೆಲವು ಸಲ ಬಹಳ ತೀವ್ರ ರೂಪದಲ್ಲಿ ಬಾಧಿಸುತ್ತದೆ.

ಈ ರೀತಿಯಲ್ಲಿ ನೋವು ಬಾಧಿಸುವ ಸಂದರ್ಭಗಳಲ್ಲಿ, ಹೆಚ್ಚು ಭಾರವನ್ನು ಆಧರಿಸದೆ (ಸೈಕ್ಲಿಂಗ್‌, ಮೊಣಕಾಲಿನ ಮುಂಭಾಗದ ನಾಲ್ಕು ಮೂಳೆಗಳನ್ನು ಸಂಕುಚಿಸುವ ವ್ಯಾಯಾಮ) ಅಥವಾ ಸಾಧಾರಣ ಭಾರವನ್ನು ಆಧರಿಸಿದ ರೀತಿಯ ವ್ಯಾಯಾಮಗಳನ್ನು (ನೀರಿನ ವ್ಯಾಯಾಮ) ಮಾಡಬಹುದು.

ನೋವು ಇಲ್ಲದಿರುವ ಸಂದರ್ಭಗಳಲ್ಲಿ ಮೊಣಕಾಲನ್ನು ಚಾಚುವ ವ್ಯಾಯಾಮ ಗಳನ್ನು ಮಾಡಬಹುದು.
ಒಂದು ವಾರದಲ್ಲಿ 3ರಿಂದ 7 ಬಾರಿ ವ್ಯಾಯಾಮಗಳನ್ನು ಮಾಡುವುದರಿಂದ ತೊಂದರೆ ಇರುವ ರೋಗಿಗಳಲ್ಲಿ ಬಹಳ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.
ಸಂಧಿವಾತದ ನಿರ್ವಹಣೆಗೆ ದೊರೆಯುವ ಔಷಧಿಗಳು ಯಾವುವು?
ಸಂಧಿವಾತದ ನೋವನ್ನು ಶಮನ ಗೊಳಿಸುವ ನೋವು ನಿವಾರಕಗಳಲ್ಲದೆ, ನೋವನ್ನು ನಿರ್ವಹಿಸಲು ಇತರ ರೀತಿಯ ಔಷಧಿಗಳೂ ಸಹ ದೊರೆಯುತ್ತವೆ. ಅವುಗಳೆಂದರೆ ಡಯಾಸಿರೀನ್‌ (diacerein), ಗ್ಲೂಕೋಸಮೈನ್‌  (glucosamine) ಹಾಗೂ ಕಾಂಡ್ರಾಯಿಟಿನ್‌ ಸಲ್ಫೆàಟ್‌  (chondroitin sulphate). ಈ ಔಷಧಿಗಳ ಪರಿಣಾಮದಲ್ಲಿ ವ್ಯತ್ಯಾಸಗಳಿರಬಹುದು. ಕೆಲವು ರೋಗಿಗಳಿಗೆ ಈ ಔಷಧಿಗಳಿಂದ ಉತ್ತಮ ಪ್ರಯೋಜನವಾಗಬಹುದು.

ಇಷ್ಟು ಮಾತ್ರವಲ್ಲದೆ, ನೋವು ಇರುವ ಸಂಧಿಗಳಿಗೆ ನೇರವಾಗಿ ಇಂಜೆಕ್ಷನ್‌ ಹ್ಯಾಲುರೋನಿಕ್‌ ಆಸಿಡ್‌ ಅನ್ನೂ ಸಹ ಚುಚ್ಚಬಹುದು. ಈ ಇಂಜೆಕ್ಷನ್‌ನಿಂದ ನೋವು ನಿವಾರಕದ ರೀತಿಯ ಪರಿಣಾಮ ಸಿಗುತ್ತದೆ. ನೋವು ನಿವಾರಕಗಳಿಂದ ಹೊಟ್ಟೆ ಉರಿಯುವ ತೊಂದರೆ ಉಂಟಾಗುತ್ತದೆ. ಆದರೆ ಇಂಜೆಕ್ಷನ್‌ನಿಂದ ಈ ತೊಂದರೆ ಉಂಟಾಗದು.
ಸಂಧಿವಾತಕ್ಕೆ ಶಸ್ತ್ರಚಿಕಿತ್ಸೆಯಿಂದ ಏನಾದರೂ ಪರಿಣಾಮ ಇದೆಯೇ?
ಹೌದು. ರೋಗಿಗೆ ತೀವ್ರ ರೂಪದಲ್ಲಿ ನೋವು ಬಾಧಿಸುತ್ತಿದ್ದರೆ, ಅಂದರೆ ವಿಶ್ರಾಂತಿಯಲ್ಲಿರುವಾಗಲೂ ನೋವು ಕಾಡುತ್ತಿದ್ದರೆ, ಆಗ ಶಸ್ತ್ರಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಸಂಧಿವಾತದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ನೋವು ನಿವಾರಕಗಳನ್ನು ಸೇವಿಸುವ ಪ್ರಮಾಣ ಕಡಿಮೆಯಾಗಬಹುದು.

ಈ ಶಸ್ತ್ರಚಿಕಿತ್ಸೆÕಗೆ ಆಸ್ಟಿಯೋಟಮಿ (osteotomy) ಎಂದು ಹೆಸರು (ಮೂಳೆಯ ಒಂದು ಭಾಗವನ್ನು ಕತ್ತರಿಸಿ ತೆಗೆದು ಜೋಡಣೆಯನ್ನು ಸರಿಪಡಿಸುವುದು). ಹಾನಿಯಾದ ಸಂಧಿಯನ್ನು ಈ ಶಸ್ತ್ರಚಿಕಿತ್ಸೆೆಯಲ್ಲಿ ಮರುಜೋಡಿಸುತ್ತಾರೆ.

ಸಂಧಿಯನ್ನು ಮರುಜೋಡಿಸಿದ ನಂತರ, ರೋಗಿಗೆ ನೋವಿನಿಂದ ಬಹಳ ಉಪಶಮನ ದೊರಕಬಹುದು. ಮಾತ್ರವಲ್ಲ, ರೋಗಿಯ ನಡಿಗೆಯೂ ಸಹ ಮೊದಲಿನಂತೆಯೇ ಆಗಬಹುದು.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ|  ಶರತ್‌ಕುಮಾರ್‌ ರಾವ್‌ ಕೆ. , ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮೂಳೆರೋಗಗಳ ಚಿಕಿತ್ಸಾ  ವಿಭಾಗ, ಕೆ.ಎಂ.ಸಿ., ಮಣಿಪಾಲ.

ಮುಖದ ನರಗಳ ದೌರ್ಬಲ್ಯ ಮತ್ತು ಬೆಲ್ಸ್‌ ಪಾಲ್ಸಿ

ಡಾ| ಶಿವಾನಂದ ಪೈ, ನ್ಯುರಾಲಜಿ ವಿಭಾಗ, ಕೆ.ಎಂ.ಸಿ., ಮಂಗಳೂರು.
ಮುಖದ  ನರಗಳಲ್ಲಿ ತೊಂದರೆಯಿಂದಾಗಿ ಮುಖದ ಸ್ನಾಯುಗಳಲ್ಲಿ ದೌರ್ಬಲ್ಯ  ಕಾಣಿಸಿಕೊಳ್ಳುವ ಸ್ಥಿತಿಯೇ ಬೆಲ್ಸ್‌ ಪಾಲ್ಸಿ .

ಈ ರೀತಿಯ ತೊಂದರೆ ಕಾಣಿಸಿಕೊಳ್ಳಲು ಕಾರಣಗಳು ಹಲವಾರು, ಅವುಗಳಲ್ಲಿ ಕೆಲವು ಈ ರೀತಿ ಇದೆ.
*ಲಕ್ವಾ

*ನಡುಕಿವಿಯ ಸೋಂಕು  (ASOM/CSOM). 

*ಹಣೆಯ ಮೂಳೆ ಸೇರಿದಂತೆ ಮೂಳೆಮುರಿತ .

*ಪ್ಯಾರೋಟಿಡ್‌ ಗ್ರಂಥಿಯ ಗಡ್ಡೆ / ಗುಳ್ಳೆ.

*ವೈರಲ್‌/ ಬ್ಯಾಕ್ಟೀರಿಯಲ್‌ ಸೋಂಕು .

*ಕಾರಣ  ತಿಳಿಯದ ಬೆಲ್ಸ್‌ ಪಾಲ್ಸಿ .

*ಜಿ.ಬಿ.ಎಸ್‌. ಸಿಂಡ್ರೋಮ್‌.
ಮುಖದ ನರದ ತೊಂದರೆಯ ಕ್ಲಿನಿಕಲ್‌ ಲಕ್ಷಣಗಳು

1. ಮುಖ ಓರೆಯಾಗುವುದು: ರೋಗಿಗೆ ಹಲ್ಲು ತೋರಿಸಲು/ ನಗಲು ಹೇಳಿದಾಗ ಮುಖ ಸರಿಯಾಗಿರುವ ಇನ್ನೊಂದು ಪಾರ್ಶ್ವದತ್ತ ಎಳೆದು ತೋರಿಬರುತ್ತದೆ.

2.ಕಣ್ಣು ಮುಚ್ಚಲು ಕಷ್ಟ  : ಈ ತೊಂದರೆ ಇರುವವರಿಗೆ ಕಣ್ಣು ಮುಚ್ಚಲು  ಕಷ್ಟ ಆಗುವುದಲ್ಲದೇ, ನಿದ್ರೆ ಮಾಡುವಾಗ  ಕಣ್ಣು ತೆರೆದೇ ಇರುತ್ತದೆ.

3.ಹಣೆ ನೆರಿಗೆ ಕಡಿಮೆ : ಈ ರೋಗಿಗಳಲ್ಲಿ ಹಣೆಯಲ್ಲಿ ನೆರಿಗೆಗಳು ಬೀಳಲಾರವು ಅವರಿಗೆ ಮೇಲೆ ನೋಡಲು ಹೇಳಿದಾಗ, ತೊಂದರೆ ಇರುವ ಪಾರ್ಶ್ವದಲ್ಲಿ ಹಣೆಯ  ನೆರಿಗೆಗಳು ಕಡಿಮೆ ಇರುತ್ತವೆ.

4.ರುಚಿಯ ತೊಂದರೆ : ತೊಂದರೆ  ಇರುವ ಭಾಗದಲ್ಲಿ ರುಚಿಯ ಗ್ರಹಣಶಕ್ತಿಯಲ್ಲಿ ತೊಂದರೆ ಇರುವ ಬಗ್ಗೆ ರೋಗಿಗಳು ದೂರುತ್ತಾರೆ.

5. ಕಿವಿಯ ತೊಂದರೆ :   ರೋಗಿ ಅಸಹಜ ಶಬ್ಧಗಳು, ತಿರುಚಲಾದ  ಶಬ್ಧಗಳ ಕೇಳಿಸುವ  ದೂರನ್ನು  ಹೇಳುತ್ತಾರೆ.

6. ಕಣ್ಣೀರು :   ಈ ರೋಗಿಗಳಲ್ಲಿ  ಕಣ್ಣುಗಳಲ್ಲಿ  ಅತಿಯಾಗಿ ನೀರು ಸ್ರಾವ ( ಎಪಿಫೆೆರಾ) ಕಾಣಿಸುತ್ತದೆ.
ಸಾಮಾನ್ಯವಾಗಿ ಮುಖದ  ನರವು ನಾಲ್ಕು ಚಟುವಟಿಕೆಗಳನ್ನು ನಡೆಸುತ್ತದೆ.
1. ಮುಖ : ಮುಖದ ಸ್ನಾಯುಗಳ ಬಲ.

2. ಕಿವಿ  : ಶ್ರವಣ.

3, ರುಚಿ  : ನಾಲಿಗೆಗೆ  ರುಚಿಯ ಸರಬರಾಜು.

4. ಕಣ್ಣು  : ಕಣ್ಣಿನಿಂದ ನೀರಿನ ಸ್ರಾವ .

ಹಾಗಾಗಿ, ಮುಖದ ನರಕ್ಕೆ ತೊಂದರೆ ಆದಾಗ ಈ ಚಟುವಟಿಕೆಗಳ ಮೇಲೆ ತೊಂದರೆ ಎದ್ದು ಕಾಣಿಸುತ್ತದೆ.
ರೋಗ ಪತ್ತೆ    
ಚ.  ರೋಗಿಗೆ ತಲೆನೋವು/ ವಾಂತಿ/ ತಲೆಸುತ್ತು / ದೇಹ ಸಂತುಲನ ತಪ್ಪುವಿಕೆ, ಪ್ರಜ್ಞೆ ತಪ್ಪುವಿಕೆ ಮತ್ತು ಕೈಧಿ-ಕಾಲುಗಳ ನಿಶ್ಶಕ್ತಿ ಇದ್ದರೆ, ಅದು ಲಕ್ವಾಹಿನ್ನೆಲೆ  ಇರುವಂತಹದಾಗಿರುತ್ತದೆ.
ಚಿ.ರೋಗಿಗೆ ಕಿವಿ ಕೇಳಿಸುವಲ್ಲಿ  ತೊಂದರೆ, ಕಿವಿನೋವು, ಕಿವಿ ತುಂಬಿರುವಂತೆ ಅನ್ನಿಸುವಿಕೆ, ಸ್ರಾವ ಇದ್ದರೆ ಅದಕ್ಕೆ ಕಿವಿಯ ಸೋಂಕು (ASOM/CSOM) .

c. ಪ್ಯಾರೋಟಿಡ್‌ ಗ್ರಂಥಿಯ ಆಸುಪಾಸಿನಲ್ಲಿ ಮುಖದಲ್ಲಿ ಉಬ್ಬುವಿಕೆ ಇದ್ದರೆ, ಈ ತೊಂದರೆಗೆ ಪ್ಯಾರೋಟಿಡ್‌  ಗುಳ್ಳೇ ಗಡ್ಡೆ  ಕಾರಣ ಆಗಿರುತ್ತದೆ.

ಛ. ಯಾವುದೇ ರೋಗಲಕ್ಷಣಗಳಿಲ್ಲದೆ ಮೇಲಿನ ಕೆಳಗಿನ ಮುಖದ  ಭಾಗಗಳೆರಡೂ ತೊಂದರೆಯಲ್ಲಿ  ಒಳಗೊಂಡಿದ್ದರೆ, ಅದು ಬೆಲ್ಸ್‌ಪಾಲ್ಸಿಬೆಲ್ಸ್‌ ಪಾಲ್ಸಿಯಾವುದೇ ವಿಶಿಷ್ಟ ಕಾರಣ ಇಲ್ಲದೆ ಕಾಣಿಸಿಕೊಳ್ಳುವ ಮುಖದ ನರಗಳ ದೌರ್ಬಲ್ಯದ ತೊಂದರೆ ಇದು, ಈ ತೊಂದರೆ ಇರುವವರಲ್ಲಿ ಮುಖದ ಮೇಲು ಮತ್ತು ಕೆಳಭಾಗಗಳೆರಡರಲ್ಲೂ  ಸಮಸ್ಯೆಗಳಿರುತ್ತದೆ.

ಸಾಮಾನ್ಯವಾಗಿ ಇದಕ್ಕೆ ವೈರಲ್‌ ಸೋಂಕು/ ಹಪೆìಸ್‌ ಸಿಂಪ್ಲೆಕ್ಸ್‌ ನರಗಳ ತೊಂದರೆ-ಸರ್ಪಸುತ್ತಿನ ನರಗಳ ತೊಂದರೆ) ಕಾರಣವಾಗಿರುತ್ತದೆಂದು ನಂಬಲಾಗಿದೆ.

ಸಾಮಾನ್ಯವಾಗಿ ಮುಖದ  ಒಂದು

ಭಾಗಕ್ಕೆ (90%) ಕಾಣಿಸಿಕೊಳ್ಳುವ ಇದು ಕೆಲವೊಮ್ಮೆ ಎರಡೂ ಭಾಗಗಳಲ್ಲಿ  (10%ಕ್ಕಿಂತ ಕಡಿಮೆ) ಕಾಣಿಸಿಕೊಳ್ಳಬಹುದು ರೋಗಿ ಮುಖ ಓರೆ ಆಗಿರುವ, ಕಣ್ಣು ಮುಚ್ಚಲು ತೊಂದರೆ ಇರುವ, ಕಣ್ಣೀರು  ಸ್ರಾವ ಆಗುತ್ತಲೇ ಇರುವ ಮತ್ತು ಅಪರೂಪಕ್ಕೆ ಶ್ರವಣಶಕ್ತಿಯಲ್ಲಿ -ರುಚಿಯಲ್ಲಿ  ತೊಂದರೆಗಳಿರುವ  ದೂರು ಹೇಳುತ್ತಾರೆ.

ಹೆಚ್ಚಿನ ಎಲ್ಲ ರೋಗಿಗಳಿಗೆ ಈ ತೊಂದರೆ ಆರಂಭ ಆಗುವ 1-2 ದಿನಗಳ ಮೊದಲು ಕಿವಿಯ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡಿರುತ್ತದೆ.
ರೋಗಪತ್ತೆ 
ವೈದ್ಯರು ತನ್ನ ತಪಾಸಣೆಯ ವೇಳೆ ಇದನ್ನು ಗುರುತಿಸಬಹುದಾಗಿದ್ದು, ಇದಕ್ಕೆ ಬೇರೆ ರೋಗಪತ್ತೆ ತಪಾಸಣೆಗಳು ಅಗತ್ಯವಿಲ್ಲ . ಆದರೆ ಪ್ರಜ್ಞೆ ತಪ್ಪುವಿಕೆ , ತಲೆನೋವು , ವಾಂತಿ, ಕೈಕಾಲುಗಳ ನಿಶ್ಶಕ್ತಿ , ಆಹಾರ  ಜಗಿಯಲು, ನುಂಗಲು ತೊಂದರೆ... ಇತ್ಯಾದಿ ಸಮಸ್ಯೆಗಳು ಜೊತೆಗಿದ್ದಾಗ, ಮೆದುಳಿನ, ಕೈ-ಕಾಲು, ಮುಖದ ನರಗಳ ಭಾಗದ ಸಿ.ಟಿ.ಸ್ಕ್ಯಾನ್‌  ಮತ್ತು  ಎಂ.ಆರ್‌.ಐ. ಸ್ಕ್ಯಾನ್‌ ಗಳು ಅಗತ್ಯ ಬೀಳುತ್ತವೆ.

ಚಿಕಿತ್ಸೆ :  ವೈದ್ಯಕೀಯ ಚಿಕಿತ್ಸೆ
ಈ ರೋಗಿಗೆ ವೈಸೊಲೋನ್‌ ಸ್ಟೀರಾಯ್ಡ ಮಾತ್ರೆಗಳು , ಅಸೈಕ್ಲೋವೀರ್‌, ಕಣ್ಣಿನ ಔಷಧಿ ನೀಡಬೇಕಾಗುತ್ತದಲ್ಲದೆ, ಶಸ್ತ್ರಕ್ರಿಯೆ ನಡೆಸಿ, ಕಣ್ಣುಮುಚ್ಚಲು  ಅನುವು ಮಾಡಿಕೊಡಬೇಕಾಗುತ್ತದೆ. ಜೊತೆಗೆ, ಮುಖದ ಸ್ನಾಯುಗಳನ್ನು ಬಲಪಡಿಸಲು ಫಿಸಿಯೊತೆರಪಿ ಕೂಡ ಅಗತ್ಯ ಇರುತ್ತದೆ.

ಸ್ನಾಯುಗಳ ಮರುಪ್ರೇರಣೆ ಇದರಿಂದ ಸಾಧ್ಯವಾಗುತ್ತದೆ. ಜೊತೆಗೆ ಸಂಶಯ ಇರುವ ಪ್ರಕರಣಗಳಲ್ಲಿ  ಇಎನ್‌ ಟಿ ತಜ್ಞರು ಕಿವಿಯ ಸೋಂಕುಗಳಿಗೆ ಸೂಕ್ತ ಚಿಕಿತ್ಸೆ  ನೀಡಬೇಕಾಗುತ್ತದೆ.
ಶಸ್ತ್ರಕ್ರಿಯೆ 
ಮುಖದ ನರವು ಜೋತುಬಿದ್ದ  ಸ್ಥಿತಿಯಲ್ಲಿದಾಗ, ಅಪರೂಪಕ್ಕೆ ಈ ಶಸ್ತ್ರಕ್ರಿಯೆ ನಡೆಸಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಗಳು ಫಲಕಾರಿ ಆಗದಿದ್ದಾಗ, ಪ್ಲಾಸ್ಟಿಕ್‌ ಸರ್ಜರಿ ನಡೆಸಿ, ಮುಖವನ್ನು  ಮರುರೂಪಿಸುವುದು ಅಗತ್ಯವಾಗಬಹುದು.

ಬೆಲ್ಸ್‌ ಪಾಲ್ಸಿ  ಅಪರೂಪದ ತೊಂದರೆ ಏನಲ್ಲ . ಆದರೆ, ಸಕಾಲದಲ್ಲಿ ಇದರ ಪತ್ತೆಮಾಡಿ ಚಿಕಿತ್ಸೆ, ಫಿಸಿಯೊತೆರಪಿ ನೀಡಿದರೆ, ಮುಖದ ವಿಕಾರಗಳನ್ನು ಭಾವನೆಗಳನ್ನು  ವ್ಯಕ್ತಪಡಿಸುವಲ್ಲಿನ ಊನಗಳನ್ನು ಸರಿಪಡಿಸುವುದು ಸಾಧ್ಯವಿದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಎಸ್‌.ಎನ್‌. ರಾವ್‌,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ನ್ಯುರಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಆಸ್ಟಿಯೊಪೋರೊಸಿಸ್‌

ಡಾ| ಕೆ. ಎಲ್‌. ಬಾಯಿರಿ
ನಿರ್ದೇಶಕರು, ಮಣಿಪಾಲ್‌ ಅಕ್ಯುನೋವಾ ಕ್ಲಿನಿಕಲ್‌ ಸಂಶೋಧನಾ ಕೇಂದ್ರ, ಶಿರ್ಡಿ ಸಾಯಿ ಬಾಬಾ ಕ್ಯಾನ್ಸರ್‌ ಆಸ್ಪತ್ರೆ, ಮಣಿಪಾಲ.
ಆಸ್ಟಿಯೊಪೋರೊಸಿಸ್‌ ಅಂದರೆ, ಶಬ್ದಶಃ   ""ಮೂಳೆಯಲ್ಲಿ ರಂಧ್ರಗಳು' ಎಂದು. ಈ ಕಾಯಿಲೆ ಇರುವ ಮನುಷ್ಯರ ಮೂಳೆಯ ಸಾಂದ್ರತೆ ಹಾಗೂ ಗುಣಮಟ್ಟಗಳು ಬಹಳ ಕುಂದುತ್ತವೆ. ಮೂಳೆಗಳ ರಂಧ್ರಗಳು ಹಾಗೂ ನಾಜೂಕುತನ ಹೆಚ್ಚಿದಂತೆ, ಮೂಳೆಯು ಮುರಿಯುವ ಸಾಧ್ಯತೆ ಹೆಚ್ಚು.


ಮೂಳೆಯು ""ನಿಧಾನವಾಗಿ' ಹಾಳಾಗುತ್ತಾ ಬರುತ್ತದೆ. ಈ ಕಾಯಿಲೆ ಇರುವವರಲ್ಲಿ, ಮೊದಲನೆಯ ಸಲ ಮೂಳೆಯು ಮುರಿಯುವವರೆಗೂ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ.

ಸೊಂಟ, ಬೆನ್ನೆಲುಬು ಹಾಗೂ ಮಣಿಕಟ್ಟಿನ ಎಲುಬುಗಳು ಆಸ್ಟಿಯೊಪೋರೊಸಿಸ್‌ ಕಾರಣದಿಂದ ಮುರಿಯಬಹುದು. ಅದರಲ್ಲೂ, ವಯಸ್ಸು ಹೆಚ್ಚಾದಂತೆ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಸೊಂಟ ಹಾಗೂ ಬೆನ್ನಿನ ಮೂಳೆಗಳು ಮುರಿಯುವ ಸಾಧ್ಯತೆ ಹೆಚ್ಚು.

ಬೆನ್ನುಮೂಳೆ ಹಾಗೂ ಸೊಂಟದ ಮೂಳೆ ಮುರಿತವು ಹೆಚ್ಚು ಆತಂಕಕಾರಿಯಾದುದು. ಯಾಕೆಂದರೆ, ಬೆನ್ನುಮೂಳೆಯು ಮುರಿಯುವುದರಿಂದ ವ್ಯಕ್ತಿಯ ಎತ್ತರ ಹಾಗೂ ದೇಹ ರಚನೆಯಲ್ಲಿ ವ್ಯತ್ಯಾಸಗಳಾಗಬಹುದು ಮಾತ್ರವಲ್ಲ, ತೀವ್ರ ಬೆನ್ನು ನೋವು ಕಾಡಬಹುದು.

ಸೊಂಟದ ಮೂಳೆ ಮುರಿತಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವೆನಿಸಬಹುದು ಹಾಗೂ ವ್ಯಕ್ತಿಯು ತನ್ನ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಇನ್ನೊಬ್ಬರನ್ನು ಆಶ್ರಯಿಸಬೇಕಾಗಬಹುದು.

ಆದರೆ, ಜೀವನ ಶೈಲಿಯ ಸುಧಾರಣೆ ಹಾಗೂ ಪರಿಣಾಮಕಾರಿ ಔಷಧಿ ಚಿಕಿತ್ಸೆಗಳಿಂದ ಆಸ್ಟಿಯೊಪೋರೊಸಿಸ್‌ ಕಾಯಿಲೆಯನ್ನು ಗುಣಪಡಿಸಬಹುದು ಅಥವಾ ಬರದಂತೆ ತಡೆಯಬಹುದು ಎನ್ನುವುದು ಸಂತೋಷದ ಸಂಗತಿಯಾಗಿದೆ.
ಮೂಳೆಗಳ ಮೂಲ ಅಂಗರಚನೆ
ಮೂಳೆಗಳು ದೇಹದ ಅತ್ಯಂತ ವಿಶೇಷವಾದ ಆಧಾರ ಅಂಗಾಂಶಗಳಾಗಿವೆ. ದೃಢತೆ ಹಾಗೂ ಗಟ್ಟಿತನ - ಇವು ಮೂಳೆಯ ಪ್ರಮುಖ ಗುಣಗಳು.

ಮೂಳೆಗಳ ಪ್ರಮುಖ ಕಾರ್ಯಗಳು
*ದೇಹದ ರಚನೆಗೆ ಸೂಕ್ತ ಆಧಾರವನ್ನು ಕೊಡುವುದು.

*ದೇಹದ ಪ್ರಮುಖ ಅಂಗಗಳಿಗೆ ರಕ್ಷಣೆಯನ್ನು ಒದಗಿಸುವುದು.

*ಅಸ್ಥಿಮಜ್ಜೆಗಳ ನಿರ್ಮಾಣ (ರಕ್ತ ಉತ್ಪಾದನೆ ಹಾಗೂ ಕೊಬ್ಬು ಶೇಖರಣೆ).

*ದೇಹದ ಕ್ಯಾಲ್ಸಿಯಂ ಖನಿಜ ಸಮಸ್ಥಿತಿಯ ನಿರ್ವಹಣೆ.

ಮೂಳೆಗಳ ರಚನೆಯಲ್ಲಿರುವ ಅಂಶಗಳು

*ಆಧಾರ ಕೋಶಗಳು (ಆಸ್ಟಿಯೋಬ್ಲಾಸ್ಟ್ಸ್ ಹಾಗೂ ಆಸ್ಟಿಯೋಸೈಟ್ಸ್‌).

*ಪುನರ್ನಿಮಾತೃ ಕೋಶಗಳು (ಆಸ್ಟಿಯೋಕ್ಲಾಸ್ಟ್ಸ್).

*ಜೀವಕೋಶ ಮೂಲದ ಕೊಲಾಜನ್‌ (collagen) ಪ್ರೊಟೀನ್‌ ಹಾಗೂ ಕೊಲಾಜನ್‌ ರಹಿತ ಪ್ರೊಟೀನ್‌ (ಆಸ್ಟಿಯೋಯ್ಡ).

*ಜೀವಕೋಶ ಮೂಲದಲ್ಲಿ (ಮ್ಯಾಟ್ರಿಕ್ಸ್‌) ಸಂಗ್ರಹವಾಗಿರುವ ಅಜೈವಿಕ ಖನಿಜ ಲವಣಗಳು.
ಮೂಳೆಯ ಜೀವಕೋಶಗಳು
ಮೂಳೆಗಳ ನಿರ್ಮಾಣ, ನಿರ್ವಹಣೆ ಹಾಗೂ ಪುನರ್ನವೀಕರಣ ಮಾಡುವ ಕೋಶಗಳು ಈ ರೀತಿಯಾಗಿವೆ:
*ಆಸ್ಟಿಯೋಬ್ಲಾಸ್ಟ್ಸ್: ಮೆಸೆಂಕೈಮಲ್‌ ಸ್ಟೆಮ್‌ (mesenchymal stem) ಕೋಶಗಳಿಂದ ಉತ್ಪತ್ತಿಯಾಗುವ ಇವು, ಮೂಳೆಗಳ ಮ್ಯಾಟ್ರಿಕ್ಸ್‌ ಸಂಶ್ಲೇಷಣೆಯನ್ನು ಮಾಡಿ, ಮುಂದೆ ಅವುಗಳನ್ನು ಖನಿಜಯುಕ್ತ ಗೊಳಿಸುತ್ತವೆ.

ಪ್ರಾಪ್ತ ವಯಸ್ಕರ ಹೆಚ್ಚಿನ ಮೂಳೆಗಳ ಹೊರಮೈಯನ್ನು ಆವರಿಸಿರುವ ಮೂಳೆಯ ಈ ಕೋಶಗಳು, ಉತ್ಪತ್ತಿಗೂ ಪುನರ್ನವೀಕರಣಕ್ಕೂ ಒಳಗಾಗುವುದಿಲ್ಲ. ಅಂದರೆ, ಈ ವಯಸ್ಸಿನವರ ಆಸ್ಟಿಯೋಬ್ಲಾಸ್ಟ್‌ ಕೋಶಗಳು ನಿಷ್ಕ್ರಿಯ ಸ್ಥಿತಿಯಲ್ಲಿ ಇರುತ್ತವೆ.

*ಆಸ್ಟಿಯೋಸೈಟ್ಸ್‌: ಹೊಸ ಮೂಳೆಗಳಲ್ಲಿ ಒಂದಾಗಿ ಇರುವ ಈ ಆಸ್ಟಿಯೋಬ್ಲಾಸ್ಟ್‌ ಕೋಶಗಳು ಅಂತಿಮವಾಗಿ, ಕ್ಯಾಲ್ಸಿಯಂ ಯುಕ್ತ ಮೂಳೆಯಾಗುತ್ತವೆ. ಮೂಳೆಯ ಮ್ಯಾಟ್ರಿಕ್ಸ್‌ನ ಆಳದಲ್ಲಿ ಇರುವ ಈ ಕೋಶಗಳು, ಮೂಳೆಯ ಹೊಸದಾದ ಆಸ್ಟಿಯೋಸೈಟ್‌ಗಳು, ಆಸ್ಟಿಯೋಬ್ಲಾಸ್ಟ್‌ಗಳು ಹಾಗೂ ಮೂಳೆಯ ಪದರದಲ್ಲಿರುವ ಜೀವಕೋವಗಳ ಜಾಲದಲ್ಲಿ ವ್ಯಾಪಕವಾದ ಸಂಪರ್ಕದಲ್ಲಿ ಇರುತ್ತವೆ.

ಮೂಳೆಯ ಮೇಲಾಗುವ ಯಾವುದೇ ರೀತಿಯ ಬಾಹ್ಯ ಸಂವೇದನೆಗಳನ್ನು ಇವು ಆಸ್ಟಿಯೋಬ್ಲಾಸ್ಟ್‌ಗಳಿಗೆ ತಲುಪಿಸಿ, ಅವುಗಳು ಮೂಳೆಯ ಮರುಹೀರುವಿಕೆ ಅಥವಾ ಉತ್ಪತ್ತಿಗೆ ಸನ್ನದ್ಧವಾಗುವಂತೆ ಸೂಚನೆಯನ್ನು ನೀಡುತ್ತವೆ.

*ಆಸ್ಟಿಯೋಕ್ಲಾಸ್ಟ್‌: ಇವು ದೊಡ್ಡದಾದ ಬಹುಕೇಂದ್ರಿತ ಕೋಶಗಳು: ಇವು ಮೂಳೆಗಳ ಖನಿಜಯುಕ್ತ ಕೋಶಗಳ ಮರುಹೀರುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮೂಳೆಯ ಮರುಹೀರುವಿಕೆಯು ಸಕ್ರಿಯವಾಗಿರುವಲ್ಲಿ ಅಂಟಿಕೊಂಡಿರುವ ಇವುಗಳು ಮೂಳೆಯ ಮ್ಯಾಟ್ರಿಕ್ಸ್‌ನ್ನು ಸಂಸ್ಕರಿಸುವ ಅಥವಾ ಹೀರುವ ಕಿಣ್ವಗಳನ್ನು ಸ್ರವಿಸುತ್ತವೆ.
ಮೂಳೆಯ ಮ್ಯಾಟ್ರಿಕ್ಸ್‌
ಇವು ಮೂಳೆಗಳು ಕೊಲಾಜನ್‌ (94%) ಹಾಗೂ ಕೊಲಾಜನ್‌ ರಹಿತ ಪ್ರೊಟೀನ್‌ಗಳಿಂದ ನಿರ್ಮಾಣವಾಗುತ್ತವೆ. ಎಲುಬಿನ ಮ್ಯಾಟ್ರಿಕ್ಸ್‌ ನಲ್ಲಿರುವ ಖನಿಜ ಲವಣಗಳಾದ ಕ್ಯಾಲ್ಸಿಯಂ ಹಾಗೂ ಫಾಸ್ಪೇಟ್‌ಗಳ ಲವಣ ಹರಳುಗಳ ಕಾರಣದಿಂದಾಗಿ ಎಲುಬಿಗೆ ಗಟ್ಟಿತನ ಹಾಗೂ ಗಡಸುತನ ಲಭ್ಯವಾಗುತ್ತದೆ.

ಕ್ಯಾಲ್ಸಿಯಂಯುಕ್ತ ಎಲುಬಿನಲ್ಲಿ  ಸುಮಾರು 25%ದಷ್ಟು ಜೈವಿಕ ಮೂಲಧಾತುವಿದ್ದರೆ, 5%ದಷ್ಟು ನೀರು ಹಾಗೂ 70%ದಷ್ಟು ಅಜೈವಿಕ ಖನಿಜಗಳು ಇರುತ್ತವೆ.
ರಚನೆ
ಹೆಚ್ಚಿನ ಮೂಳೆಗಳ ಮೂಲ ರಚನೆಯು ಈ ಎಲ್ಲ ಅಂಶಗಳನ್ನು ಹೊಂದಿರುತ್ತವೆ.

*ಹೊರಮೈ ತೊಗಟೆ ಅಥವಾ ಗಟ್ಟಿ ಪದರ.

*ಒಳಮೈ ಆಧಾರಪಟ್ಟಿ ಅಥವಾ ಮೃದು ಪದರ.

*ಪರ್ಯಸ್ಥಿ (periosteum) ಅಥವಾ ಮೃಧ್ವಸ್ಥಿ ಇಲ್ಲದಿರುವಲ್ಲಿ ಮೂಳೆಯ ಪೊರೆ.

*ಎಂಡೋಸ್ಟಿಯಂ (an endosteum).
ಮೂಳೆಯ ಗಟ್ಟಿಯಾದ ಹೊರಮೈಯು ವ್ಯಕ್ತಿಯ ದೇಹ ರಚನೆಯನ್ನು ಕಾಯ್ದುಕೊಳ್ಳು ತ್ತದೆ. ಅಂತೆಯೇ, ಮೂಳೆಯ ಒಳ ಭಾಗದ ಆಧಾರಪಟ್ಟಿಯು ಮೂಳೆಗೆ ಸಾಮರ್ಥ್ಯವನ್ನು ಒದಗಿಸಿ, ಆಂತರಿಕ ಆಧಾರವನ್ನು ಕೊಡುತ್ತದೆ.

ಬಹಳ ಒತ್ತಾಗಿ ಪದರ ರೂಪದಲ್ಲಿ ನಿರ್ಮಾಣಗೊಂಡಿರುವ ಮೂಳೆಯ ಕೋಶಗಳ ನಡುವಿನ ಸಂಕೀರ್ಣ ರಚನೆಯಲ್ಲಿ ಖಾಲಿ ಜಾಗ ಇರುವುದು ಬಹಳ ಕಡಿಮೆ. ಕೋಶಗಳ ಜಾಲದ ನಡುವಿನ ಆಧಾರ ಪಟ್ಟಿಯ ಖಾಲಿ ಜಾಗವನ್ನು ಅಸ್ಥಿಮಜ್ಜೆಗಳು ಆವರಿಸಿರುವಂತೆ ಮೂಳೆಯ ರಚನೆ ಇದೆ.

ಮೂಳೆಗೆ ಹೊರಭಾಗದಿಂದ ಬೀಳುವ ಅತ್ಯಧಿಕ ಒತ್ತಡಗಳನ್ನು ತಾಳಿಕೊಳ್ಳಲು ಅನುಗುಣವಾಗಿರುವಂತೆ ಮೂಳೆಯ ಒಳಮೈಯ ರಚನೆಯು ವಿನ್ಯಾಸಗೊಂಡಿದ್ದು, ಎರಡು ಪೊರೆಗಳಿಂದ ಆವೃತವಾಗಿವೆ.

1) ಪರ್ಯಸ್ಥಿ  (periosteum) : ಮೂಳೆಯ ಮೈಯನ್ನು ಆವರಿಸಿರುವ (ಕೊನೆಯ ಭಾಗವನ್ನು ಬಿಟ್ಟು ) ದಟ್ಟ ವಾದ ನಾರಿನಂತಹ ಈ ಪೊರೆಯು, ಸ್ನಾಯು ಹಾಗೂ ಸ್ನಾಯು ರಜ್ಜುಗಳಿಗೆ ಅಂಟಿರುತ್ತದೆ. ಇವುಗಳಲ್ಲಿರುವ ನರ, ರಕ್ತನಾಳಗಳ ಆ ಭಾಗದ ಮೂಳೆಗೆ ಪೋಷಣೆಯನ್ನು  ಒದಗಿಸುತ್ತವೆ.

2) ಎಂಡೋಸ್ಟಿಯಂ  (endosteum): ಇದು ಅಸ್ಥಿಮಜ್ಜೆಯ ಕುಹರದ ಅಂಗಾಂಶಗಳನ್ನು ಜೋಡಿಸುವ ರಕ್ತನಾಳಗಳ ತೆಳು ಪದರ.
ಮೂಳೆಗಳ ವಿಧಗಳು
ಮೂಳೆಯಂತಹ ರಚನೆಗೆ ಕಾರಣ ವಾಗುವ ಕೊಲಾಜನ್‌ ಉತ್ಪತ್ತಿಯ ಆಧಾರದಿಂದ ಎರಡು ರೀತಿಯ ಮೂಳೆಗಳನ್ನು ಗುರುತಿಸಬಹುದು.

*ಹೆಣಿಗೆ ಮೂಳೆ ಅಥವಾ ಓವನ್‌ ಮೂಳೆ (woven bone) ಕೊಲಾಜನ್‌ ನಾರುಗಳ ಅಸಮರ್ಪಕ ಸಂಯೋಜನೆಯಿಂದ ಆದ ಈ ಮೂಳೆ ಗಳು ಚಟುವಟಿಕೆಯ ದೃಷ್ಟಿಯಿಂದ ದುರ್ಬಲ ಮೂಳೆಗಳಾಗಿವೆ.

*ಹಾಳೆ ಮೂಳೆ ಅಥವಾ ಲಾಮೆಲ್ಲಾರ್‌ ಮೂಳೆ (Lamellar bone) ಇವು ಕೊಲಾಜನ್‌ಗಳ  ಹಾಳೆಗಳ ರೀತಿಯಲ್ಲಿ ಆದ ಸಮನಾಂತರವಾದ ಹಾಗೂ ಕ್ರಮವಾದ ಜೋಡಣೆಯಿಂದ ಆದ ಮೂಳೆಗಳ ರಚನೆ. ಇವು ಬಹಳ ಶಕ್ತಿಶಾಲಿಯಾದ ಮೂಳೆಗಳು.

ಆಸ್ಟಿಯೋಬ್ಲಾಸ್ಟ್‌ಗಳು ವೇಗವಾಗಿ ಆಸ್ಟಿಯಾಯ್ಡಗಳನ್ನು ಉತ್ಪತ್ತಿ ಮಾಡಿದಾಗ, ಓವನ್‌ ಮೂಳೆಗಳು ನಿರ್ಮಾಣವಾಗುತ್ತವೆ. ಭ್ರೂಣದಲ್ಲಿ ಆರಂಭಕ್ಕೆ ಇರುವುದು ಇದೇ ರೀತಿಯ ಮೂಳೆಗಳು. ಆದರೆ, ಇವು ಆಮೇಲೆ ಲ್ಯಾಮೆಲ್ಲಾರ್‌ ಮೂಳೆಗಳಾಗಿ ಪರಿವರ್ತಿತವಾಗುತ್ತವೆ.

ವಯಸ್ಕರಲ್ಲಿ ಬಹಳ ವೇಗವಾಗಿ ಮೂಳೆಯು ನಿರ್ಮಾಣವಾಗುವ ಸಂದರ್ಭದಲ್ಲಿ ವೊವನ್‌ ಮೂಳೆಗಳು ಉಂಟಾಗುತ್ತವೆ. ಅಂದರೆ, ಮೂಳೆ ಮುರಿತವು ಗುಣಮುಖವಾಗುವ ಸಂದರ್ಭದಲ್ಲಿ ಒಂದು ಸಲ ಮೂಳೆ ಮುರಿದರೆ ಆಗ ಅಲ್ಲಿ ಮೊದಲು ವೊವನ್‌ ಮೂಳೆ ಬೆಳೆಯುತ್ತದೆ.

ಆಮೇಲೆ, ಅದರ ಮೇಲೆ ಲ್ಯಾಮೆಲ್ಲಾರ್‌ ಮೂಳೆ ಪುನರ್ನಿರ್ಮಾಣಗೊಳ್ಳುತ್ತದೆ. ವಾಸ್ತವವಾಗಿ ಆರೋಗ್ಯವಂತ ವಯಸ್ಕರಲ್ಲಿ ಇರುವುದೆಲ್ಲವೂ ಲ್ಯಾಮೆಲ್ಲಾರ್‌ ಮೂಳೆಗಳೇ ಆಗಿವೆ.
ಮೂಳೆಗಳ ಬೆಳವಣಿಗೆ ಹಾಗೂ ಅಭಿವೃದ್ಧಿ

ಮೂಳೆಗಳ ಉತ್ಪನ್ನದಲ್ಲಿ ಎರಡು ಪ್ರಕ್ರಿಯೆಗಳಿವೆ

*ಆಂತರಿಕ ಜೋಡಣಾ  ಅಂಗಾಂಶ ಪೊರೆಗಳ ಹಾಳೆಗಳು ಮೂಳೆಯ ಅಂಗಾಂಶದೊಂದಿಗೆ ಪರಿವರ್ತನೆಯಾದಾಗ ಚಪ್ಪಟೆಯಾದ ಮೂಳೆಗಳು ಉತ್ಪತ್ತಿಯಾಗುತ್ತದೆ (ಉದಾ: ತಲೆಬುರುಡೆಯ ಮೂಳೆ, ಕತ್ತಿನ ಮೂಳೆ, ದವಡೆಯ ಮೂಳೆ)

*ಗಾಜಿನ ರೀತಿಯಲ್ಲಿರುವ ಮೃದ್ವಸ್ಥಿಗಳು ಹಾಗೂ ಮೂಳೆಯ ಅಂಗಾಂಶಗಳು ಪರಿವರ್ತನೆಯಾಗಿ ಎಂಡೋಕಾಂಡ್ರಲ್‌ (Endochondral) ಮೂಳೆಗಳು ಉತ್ಪತ್ತಿಯಾಗುತ್ತವೆ (ಉದಾ: ತೊಡೆ, ಭುಜ, ಮೊಣಕಾಲು, ರೇಡಿಯಸ್‌).

ಬಾಲ್ಯ ಹಾಗೂ ತಾರುಣ್ಯದಾದ್ಯಂತ ಉದ್ದನೆಯ ಮೂಳೆಗಳ ಉದ್ದ ಹಾಗೂ ದಪ್ಪದಲ್ಲಿ ಬೆಳವಣಿಗೆಯಾಗುತ್ತಿರುತ್ತದೆ. ಪ್ರತಿ ಉದ್ದನೆಯ ಮೂಳೆಯ ಕೊನೆ ಯಲ್ಲಿ ಎಂಡೋಕಾಂಡ್ರಲ್‌ ಮೂಳೆ ಉತ್ಪತ್ತಿಯಾಗುತ್ತಿರುವುದರಿಂದಾಗಿ ಮೂಳೆಯು ಉದ್ದಕ್ಕೆ ಬೆಳೆಯುತ್ತಿರುತ್ತದೆ.

ಮೂಳೆಯ ಹೊರಪದರದಲ್ಲಿ ಹೊಸ ಪದರವು ಬೆಳವಣಿಗೆಯಾಗುವ ಕಾರಣದಿಂದಾಗಿ ಮೂಳೆಯ ಸುತ್ತಳತೆಯಲ್ಲಿ ಹೆಚ್ಚಳವಾಗುತ್ತಿರುತ್ತದೆ.
ಆಸ್ಟಿಯೊಪೋರೊಸಿಸ್‌ನ ರೋಗಲಕ್ಷಣ ಶರೀರ ವಿಜ್ಞಾನ
ಮೂಳೆಯ ನಿರ್ವಹಣೆ ಎಂಬುದು ಬಹಳ ಸೂಕ್ಷ್ಮವಾದ ಕಾರ್ಯವಾಗಿದೆ. ಮೂಳೆಗಳಲ್ಲಿ ನಿತ್ಯವೂ ಸ್ವಲ್ಪ ಅಂಶ ಎಲುಬು ನಷ್ಟವಾಗಿ, ಮತ್ತೆ ಅಷ್ಟೇ ಪ್ರಮಾಣದ ಖನಿಜ ಲವಣಗಳು ಮೂಳೆ ಗಳಲ್ಲಿ ಕೂಡಿಕೊಳ್ಳುತ್ತವೆ.
ಈ ಪ್ರಕ್ರಿಯೆಗೆ ಮರುಹೀರುವಿಕೆ ಎಂದು ಹೆಸರು. ಮರು ಹೀರುವಿಕೆಯ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದರೆ ಮಾತ್ರವೇ ಮೂಳೆಯ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

ಒಂದು ವೇಳೆ ಈ ಸಂತುಲನದಲ್ಲಿ ವ್ಯತ್ಯಾಸವಾದರೆ, ಅಂದರೆ ಮರುಹೀರುವಿಕೆಯ ಪ್ರಮಾ ಣವು ಜಾಸ್ತಿಯಾದರೆ, ಕ್ರಮೇಣ ಮೂಳೆಯು ಮೃದುವಾಗುತ್ತದೆ, ಬೇಗನೆ ಮುರಿಯುತ್ತದೆ. ಮೂಳೆಗಳ ಮರುಹೀರುವಿಕೆ ಹಾಗೂ ಮರು ಸಂಗ್ರಹಣೆಗೂ ಅಥವಾ ಪುನರ್ನವೀಕರಣ ಪ್ರಕ್ರಿಯೆಯ ನಿರಂತರತೆಗೂ ಆಸ್ಟಿಯೊಪೋರೊಸಿಸ್‌ಗೂ ನೇರ ಸಂಬಂಧವಿದೆ.
ಮೂಳೆಗಳ ಪುನರ್ನವೀಕರಣವನ್ನು  ಹೇಗೆ ನಿಯಮಿತಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಂಡರೆ, ಆಸ್ಟಿಯೊಪೋರೊಸಿಸ್‌ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಹಾಗೂ ತಡೆಯಲು ಸಾಧ್ಯವಿದೆ.

ಮೂಳೆಗಳು ಆಕಾಶನೌಕೆಗಳಿದ್ದ ಹಾಗೆ, ಎಷ್ಟು ಹಗುರವೋ ಅಷ್ಟೇ ಸಾಮರ್ಥ್ಯವುಳ್ಳವುಗಳು. ಅವುಗಳ ವಿನ್ಯಾಸವೇ ಆ ರೀತಿಯಲ್ಲಿ ಇದೆ. ಕೊಳವೆಯ ಆಕಾರದಲ್ಲಿ ಇರುವ ದೊಡ್ಡ ಮೂಳೆಗಳ ಹೊರಮೈಯಲ್ಲಿ ಗಟ್ಟಿ ಕವಚ ಅಥವಾ ತೊಗಟೆ ಇರುತ್ತದೆ.

ಅದರ ಒಳಮೈಯ ಸುತ್ತಲೂ ಮೃದುವಾದ  ಆಧಾರಪಟ್ಟಿಯ ಪದರವಿರುತ್ತದೆ. ಇವೆರಡರ ಸಂಯೋಜನೆಯಿಂದ ಮೂಳೆಗೆ ಹಗುರತೆ ಹಾಗೂ ಗಟ್ಟಿತನ ಪ್ರಾಪ್ತಿಯಾಗುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಕೆ. ಎಲ್‌. ಬಾಯಿರಿ, ನಿರ್ದೇಶಕರು, ಮಣಿಪಾಲ್‌ ಅಕ್ಯುನೋವಾ ಕ್ಲಿನಿಕಲ್‌ ಸಂಶೋಧನಾ ಕೇಂದ್ರ, ಶಿರ್ಡಿ ಸಾಯಿ ಬಾಬಾ ಕ್ಯಾನ್ಸರ್‌ ಆಸ್ಪತ್ರೆ, ಮಣಿಪಾಲ.

ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಗುಣಮಟ್ಟ

ಡಾ| ಶ್ರೀಕಲಾ ಬಾಳಿಗ
ಮುಖ್ಯಸ್ಥರು, ಮೈಕ್ರೊಬಯಾಲಜಿ ವಿಭಾಗ ಮತ್ತು ನಿರ್ದೇಶಕರು,  ಕೆ.ಎಂ.ಸಿ ಆಸ್ಪತ್ರೆ ಪ್ರಯೋಗಾಲಯಗಳು, ಮಂಗಳೂರು.
ಮತ್ತು
ಡಾ| ಕೆ.ಆಶೋಕ ಪ್ರಭು, ಅಸೊಸಿಯೇಟ್‌ ಪ್ರೊಫೆಸರ್‌,  ಬಯೊಕೆಮಿಸ್ಟ್ರಿ  ವಿಭಾಗ,ಕೆ.ಎಂ.ಸಿ., ಮಂಗಳೂರು.

ಆರೋಗ್ಯ-ರೋಗಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳು ವ್ಯಕ್ತಿಯ  ದೇಹದಲ್ಲಿರುವ ಅಸಹಜತೆ ಅಥವಾ ರೋಗ ಸ್ಥಿತಿಗಳನ್ನು ಗುರುತಿಸಿ ಪತ್ತೆ ಮಾಡುವುದು ಯಾವುದೇ ವೈದ್ಯಕೀಯ ಪ್ರಯೋಗಾಲಯದ ಮೂಲಭೂತ ಕರ್ತವ್ಯವಾಗಿದೆ.

ಇದಲ್ಲದೆ, ಚಿಕಿತ್ಸೆಯ ಪರಿಣಾಮಕಾರಿತನವನ್ನು ಮರುಭೇಟಿಗಳ   ವೇಳೆ ಗುರುತಿಸುವುದು ಮತ್ತು ಆರೋಗ್ಯವಂತರು ತಮ್ಮ ಆರೋಗ್ಯ ಸುಸ್ಥಿತಿಯಲ್ಲಿದೆ  ಎಂಬುದನ್ನು ಖಚಿತ ಪಡಿಸಿಕೊಳ್ಳಲು ನಿಯಮಿತವಾಗಿ ತಪಾಸಣೆಗಳಿಗೆ  ಒಳಗಾಗುವುದು ವೈದ್ಯಕೀಯ ಪ್ರಯೋಗಾಲಯಗಳಲ್ಲೆ. ಒಂದು ಅಂದಾಜಿನ ಪ್ರಕಾರ, ರೋಗಿಯೊಬ್ಬನ ಆರೈಕೆಗೆ ಅಗತ್ಯವಿರುವ ಮಾಹಿತಿಗಳಲ್ಲಿ  70% ಭಾಗ ದೊರೆಯುವುದು ಕ್ಲಿನಿಕಲ್‌ ಪ್ರಯೋಗಾಲಯಗಳಲ್ಲೆ.

ಹಾಗಾಗಿ, ಪ್ರಯೋಗಾಲಯದಲ್ಲಿ ಎಲ್ಲ ಪ್ರಕ್ರಿಯೆಗಳೂ ತಪ್ಪು ರಹಿತವಾಗಿ ನಡೆಯಬೇಕಾದುದು ಬಹುದೊಡ್ಡ ಸವಾಲೇ ಸರಿ.
ಪ್ರಯೋಗಾಲಯಗಳಿಗೆ ಮಾನ್ಯತೆ ಎಂದರೇನು?
ಪ್ರಯೋಗಾಲಯಗಳಿಗೆ ಮಾನ್ಯತೆ ಪ್ರಕ್ರಿಯೆ ಎಂಬುದು ಸೂಕ್ತ  ಪ್ರಾಧಿಕಾರವೊಂದು, ಒಂದು ಪ್ರಯೋಗಾಲಯದ ನಿರ್ದಿಷ್ಟ ತಪಾಸಣೆಗಳ  ತಾಂತ್ರಿಕ ಸಮರ್ಪಕತೆ-ಸಾಮರ್ಥ್ಯಗಳನ್ನು ಒರೆಗೆ ಹಚ್ಚುವ ಪ್ರಕ್ರಿಯೆ. ಇದು ಹೊರಗಿನ ಪಕ್ಷವೊಂದರ ಮೂಲಕ (ಅಂದರೆ ಪ್ರಯೋಗಾಲಯದಿಂದ ಸ್ವತಂತ್ರವಾದ) ನಡೆಯುವುದಾಗಿದ್ದು , ಅಂತಾರಾಷ್ಟ್ರೀಯ ಮಾನದಂಡವಾದ ISO/IEC 15189:2007 ಅನ್ವಯ ನಡೆಯುತ್ತದೆ.

ತಾಂತ್ರಿಕವಾಗಿ ಪರಿಣತಿ ಇರುವ ವಿಶ್ಲೇಷಕರು  ಒಂದು ತಪಾಸಣೆಯ ಫ‌ಲಿತಾಂಶದ ಮೇಲೆ  ಪ್ರಭಾವ ಬೀರಬಲ್ಲ ಎಲ್ಲ ಅಂಶಗಳನ್ನೂ ಈ ಪ್ರಕ್ರಿಯೆಯ ವೇಳೆ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಒಂದು ಪ್ರಯೋಗಾಲಯಕ್ಕೆ ಈ ಮಾನ್ಯತೆ ದೊರೆತಿದೆ ಎಂದರೆ, ಆ ಪ್ರಯೋಗಾಲಯ ಎಲ್ಲ ಸಮಯಗಳಲ್ಲೂ  ಮತ್ತು ಎಲ್ಲ ಹಂತಗಳಲ್ಲೂ ಅಂತಾರಾಷ್ಟ್ರೀಯ ಮಾನದಂಡಗಳನ್ವಯ ಕಾರ್ಯಾಚರಿಸುತ್ತಿದೆ ಎಂದು  ಅರ್ಥ.

ಮಾನ್ಯತೆ  ಪಡೆದ ಪ್ರಯೋಗಾಲಯಗಳು,  ತಮ್ಮ ಫಲಿತಾಂಶವನ್ನು  ಮಾನ್ಯತೆ ನೀಡಿರುವ ಪ್ರಾಧಿಕಾರದ  ಚಿಹ್ನೆಯ ಅಡಿ ಪ್ರಕಟಿಸುತ್ತವೆ.

ಭಾರತ ಸರಕಾರದ ವಿಜ್ಞಾನ  ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ  ಬರುವ  ನ್ಯಾಷನಲ್‌ ಅಕ್ರೆಡಿಟೇಷನ್‌ ಬೋರ್ಡ್‌ ಫಾರ್‌ ಟ್ರೆçನಿಂಗ್‌ ಆ್ಯಂಡ್‌ ಕ್ಯಾಲಿಬ್ರೇಶ‌ನ್‌ ಲ್ಯಾಬೊರೇಟರೀಸ್‌ -NABL
) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು , ಅದರ ಮುಖ್ಯಾಲಯ ಹೊಸದಿಲ್ಲಿಯಲ್ಲಿದೆ, ಅದು ವೈದ್ಯಕೀಯ ಪ್ರಯೋಗಾಲಯಗಳಿಗೆ ಮಾನ್ಯತೆ  ನೀಡುವ ಏಕೈಕ ಸಂಸ್ಥೆ ಆಗಿದೆ.

ಅದು ಅಂತಾರಾಷ್ಟ್ರೀಯ ಮಾನದಂಡ ಮಾರ್ಗಸೂಚಿ ISO/IEC 15189-&2007 ಅನ್ವಯ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುತ್ತದೆ.
ಮಾನ್ಯತೆ ಏಕೆ ಬೇಕು?
ಮಾನ್ಯತೆ ಗಳಿಸಿರುವುದು ಎಂದರೆ ಗ್ರಾಹಕರು  ಬಯಸುವ  ವಿಶ್ವಾಸಾರ್ಹ ತಪಾಸಣಾ ಸೇವೆಗಳನ್ನು ಒದಗಿಸಲು ಸಮರ್ಥವಾಗಿರುವುದು  ಎಂದೇ ಅರ್ಥ. ಮಾನ್ಯತೆ ಪಡೆದ ಪ್ರಯೋಗಾಲಯವೊಂದರ ತಪಾಸಣಾ ವರದಿಯ  ಮೇಲೆ ಗ್ರಾಹಕರ ವಿಶ್ವಾಸ ಹೆಚ್ಚಿರುತ್ತದೆ.

ಇಂದು ಗೋಬಲೈಜೇಷನ್‌ ಮತ್ತು ಲಿಬರಲೈಜೇಷನ್‌ ಯುಗದಲ್ಲಿ ಪ್ರಯೋಗಾಲಯಗಳು  ಅಂತಾರಾಷ್ಟ್ರೀಯ ಮಾನದಂಡಗಳನ್ವಯ ಸಮರ್ಥವಾಗಿರುವುದು ಅನಿವಾರ್ಯವೂ ಆಗಿದೆ.
ಪ್ರಯೋಗಾಲಯಗಳು ಕೇವಲ ISO 9001 ಮಾನ್ಯತೆ ಗಳಿಸಿದರೆ ಸಾಕಾಗುವುದಿಲ್ಲ .

ಅದು ಆ ಪ್ರಯೋಗಾಲಯದ ತಾಂತ್ರಿಕ ಪರಿಣತಿಯ ಬಗ್ಗೆ ಏನೂ ಹೇಳುವುದಿಲ್ಲ . ಹಾಗಾಗಿ, ಒಂದು ಪ್ರಯೋಗಾಲಯದ ಗುಣಮಟ್ಟ ನಿರ್ಧಾರಕ್ಕೆ ಕೇವಲ ಸರ್ಟಿಫಿಕೇಶನ್‌ ಮಾತ್ರವಲ್ಲ , ಅಕ್ರೆಡಿಟೇಷನ್‌ (ಮಾನ್ಯತೆ) ಬಹಳ ಮುಖ್ಯ.
ಪ್ರಯೋಗಾಲಯ ಮಾನ್ಯತೆಯ ಲಾಭಗಳು
1-ಮಾನ್ಯತೆ ಪಡೆದ ಪ್ರಯೋಗಾಲಯಗಳ ಫಲಿತಾಂಶಗಳು ಹೆಚ್ಚು ನಿಖರ ಮತ್ತು ಯಾವತ್ತಿಗೂ ನಂಬಲರ್ಹ.

2. ಗ್ರಾಹಕರ ವಿಶ್ವಾಸ ಮತ್ತು ತ್ರಪ್ತಿ ಪ್ರಮಾಣ ಹೆಚ್ಚಳ.

3.ಪ್ರಯೋಗಾಲಯ ಪ್ರಕ್ರಿಯೆಗಳು  ಮತ್ತು ಗುಣಮಟ್ಟ  ನಿಯಂತ್ರಣ ಹಾಗೂ ತಾಂತ್ರಿಕ ಸಾಮರ್ಥ್ಯ ವ್ಯವಸ್ಥೆಯ ಬಗ್ಗೆ ಪ್ರತಿಕ್ರಿಯೆಗಳ ಮೇಲೆ ಹೆಚ್ಚು ಒಳ್ಳೆಯ  ನಿಯಂತ್ರಣ ಸಾಧ್ಯ.

4. ತಪ್ಪು ಫಲಿತಾಂಶಗಳ ಸಾಧ್ಯತೆ ಅತ್ಯಂತ ಕನಿಷ್ಠ

5. ತಪಾಸಣೆಯಲ್ಲಿ ಮತ್ತು ಪ್ರಯೋಗಾಲಯದ ಸಿಬಂದಿಗಳಲ್ಲಿ ಪ್ರಯೋಗಾಲಯದ ಬಗ್ಗೆ ವಿಶ್ವಾಸ ಹೆಚ್ಚಳ.

6. ಪ್ರಯೋಗಾಲಯ ಮತ್ತು ಗ್ರಾಹಕರಿಬ್ಬರಿಗೂ ಹಣ ಮತ್ತು  ಸಮಯಗಳಲ್ಲಿ  ಉಳಿತಾಯ, ಮತ್ತೆ ಮತ್ತೆ ತಪಾಸಣೆಗಳಿಗೆ  ಒಳಗಾಗಬೇಕಾಗಿಲ್ಲ.

7. ಮಾನ್ಯತೆ ಪಡೆದ  ಪ್ರಯೋಗಾಲಯ ಗಳನ್ನು  ಗ್ರಾಹಕರು ಮಾರ್ಗದರ್ಶಿಗಳ ಮೂಲಕ ಪತ್ತೆ ಹಚ್ಚಿ, ತಮ್ಮ ನಿರ್ದಿಷ್ಟ  ಆವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು.

8.ಮಾನ್ಯತೆ ಪಡೆದ ಪ್ರಯೋಗಾಲಯಗಳ   ಫಲಿತಾಂಶಕ್ಕೆ ದೇಶದಲ್ಲಿ ಮಾತ್ರವಲ್ಲ , ವಿದೇಶಗಳಲ್ಲಿ ಮಾನ್ಯತೆ ಇದೆ .

9. ಇದಲ್ಲದೆ NABLಸಂಸ್ಥೆಯು ಅಂತಾರಾಷ್ಟ್ರೀಯ ಪ್ರಯೋಗಾಲಯ ಮಾನ್ಯತೆ  ನೀಡಿಕೆ ಸಂಸ್ಥೆಗಳ ಒಕ್ಕೂಟದ (ILAC) ಮತ್ತು ಏಷ್ಯಾ ಪೆಸಿಫಿಕ್‌ ಪ್ರಯೋಗಾಲಯ ಮಾನ್ಯತೆ ನೀಡಿಕೆ ಸಂಸ್ಥೆಗಳ ಒಕ್ಕೂಟ  (APLAC) ಸದಸ್ಯ ಸಂಸ್ಥೆಯಾಗಿದೆ. ಹಾಗಾಗಿ ಆ ಸಂಸ್ಥೆ ಕೂಡ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಯೇ  ಕಾರ್ಯಾಚರಿಸಬೇಕಾಗುತ್ತದೆ.

ಕೆ.ಎಂ.ಸಿ. ಪ್ರಯೋಗಾಲಯ ಸೇವೆಗಳ ವಿಭಾಗವು  (KMCLS) ತನ್ನ ಎಲ್ಲ ಹಂತಗಳಲ್ಲಿ  ತಪ್ಪುರಹಿತ  ಸೇವೆಗೆ ಬದ್ಧವಾಗಿದೆ. ಪ್ರಯೋಗಕ್ಕಾಗಿ ಮಾದರಿಗಳನ್ನು ಪಡೆಯುವ ಹಂತದಿಂದ ಆರಂಭಿಸಿ, ಫಲಿತಾಂಶವನ್ನು  ವರದಿ ಮಾಡುವ ತನಕದ ಎಲ್ಲ ಹಂತಗಳಲ್ಲಿ  ಶೂನ್ಯ ತಪ್ಪು  ಸಾಧಿಸಿರುವ ಪ್ರಯೋಗಾಲಯ ಇದಾಗಿದೆ.

ಗುಣಮಟ್ಟ  ಎಂಬುದೊಂದು ನಿರಂತರ  ಪ್ರಯಾಣವೇ ಹೊರತು ಒಂದು ನಿಗದಿತ ಗುರಿ ಅಲ್ಲ  ಎಂಬುದು  (ಓMಇಔಖ) ನ ನಂಬಿಕೆಯಾಗಿದ್ದು , ಗುಣಮಟ್ಟದ  ಮಾನದಂಡಗಳನ್ನು  ಖಾತ್ರಿ ಪಡಿಸಿಕೊಳ್ಳಲು,  ಇಲ್ಲಿ  ನಿರಂತರ ಪ್ರಯತ್ನ ನಡೆಯುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಚಿರಂಜಯ್‌ ಮುಖ್ಯೋಪಾಧ್ಯಾಯ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮೈಕ್ರೊಬಯಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಬುಧವಾರ, ನವೆಂಬರ್ 2, 2011

ನೀವು ಮದ್ಯಪಾನ ಮಾಡುತ್ತಿರುವಿರಾ ?

ಡಾ| ಅರುಣ್‌ ಮಲ್ಯ, ಪಥ್ಯಾಹಾರ ತಜ್ಞರು, ಕೆ.ಎಂ.ಸಿ., ಅಂಬೇಡ್ಕರ್‌ ವೃತ್ತ, ಮಂಗಳೂರು - 1. 


ಮದ್ಯಪಾನ ಅಥವಾ ಆಲ್ಕೋಹಾಲ್‌ ಎಂಬುದು ಒಂದು ಸಾಂದರ್ಭಿಕ ಪೇಯ. ಆದರೆ, ಇಂದಿನ ಆರೋಗ್ಯಕರ ಜೀವನಶೈಲಿಯಲ್ಲಿ  ಮದ್ಯಪಾನವೂ ಸಹ ಸ್ಥಾನ ಪಡೆದುಕೊಂಡಿದೆ.

ದಿನದಲ್ಲಿ  ಒಮ್ಮೆ ಲಘುವಾಗಿ ಸೇವಿಸುವ ಮದ್ಯವು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಕೆಲವು ತಜ್ಞರ ಅಭಿಪ್ರಾಯ. ಅಂದರೆ ಇದರಿಂದ ಅಧಿಕ ರಕ್ತದ ಒತ್ತಡದ ತೊಂದರೆ, ಹೃದಯದ ತೊಂದರೆಗಳಿಗೆ ಉತ್ತಮ ಎನ್ನುವುದು ಇವರ ಅನಿಸಿಕೆ. ಆದರೆ, ದಿನಕ್ಕೆ ಒಂದು ಸಲ ಸೇವಿಸುವ ಪ್ರಮಾಣದಲ್ಲಿ  ಹೆಚ್ಚಳವಾದರೆ, ಅದರಿಂದ ನಿಮ್ಮ ದೇಹಕ್ಕೆ ತೊಂದರೆಯಾಗುವುದು ಖಂಡಿತ.


ಮದ್ಯಪಾನ ಮಾಡಿದಾಗ ದೇಹದಲ್ಲಿ  ಜರಗುವ ಚಯಾಪಚಯ ಪ್ರಕ್ರಿಯೆಯು, ಆಹಾರ, ಪಾನೀಯಗಳನ್ನು ಸೇವಿಸಿದಾಗ ಜರಗುವ ಪ್ರಕ್ರಿಯೆಗಳಿಗಿಂತಲೂ ಭಿನ್ನವಾದುದು. ಸಾಮಾನ್ಯ ಸಂದರ್ಭಗಳಲ್ಲಿ ದೇಹವು, ಬಹಳ ನಿಧಾನವಾಗಿ ಜೀರ್ಣವಾಗುವ ಕಾಬೋìಹೈಡ್ರೇಟ್‌, ಪ್ರೊಟೀನ್‌ ಹಾಗೂ ಕೊಬ್ಬಿನ ಅಂಶಗಳಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ಆದರೆ, ಆಲ್ಕೋಹಾಲ್‌ ದೇಹವನ್ನು ಸೇರಿದೊಡನೆ ಅದು ಜೀರ್ಣವಾಗುವ ಪ್ರಕ್ರಿಯೆಯ ಅಗತ್ಯವೇ ಇಲ್ಲದೆ, ಹಾಗೆಯೆ ಬಹಳ ಕ್ಷಿಪ್ರವಾಗಿ ದೇಹಗತವಾಗುತ್ತದೆ. ಇದರಲ್ಲಿರುವ ಕಾಬೋìಹೈಡ್ರೇಟ್‌ ಹಾಗೂ ಕೊಬ್ಬಿನ ಅಂಶಗಳು ದೇಹದ ಕೊಬ್ಬುಗಳಾಗಿ ಬದಲಾಗುತ್ತವೆ. ಮುಂದಕ್ಕೆ ಇದೇ ಕೊಬ್ಬು ದೇಹದ ಶಾಶ್ವತ ಕೊಬ್ಟಾಗಿ ಸಂಗ್ರಹಗೊಳ್ಳುತ್ತದೆ.

ಆಲ್ಕೋಹಾಲ್‌ ನಮ್ಮ ದೇಹದಲ್ಲಿ  ಮೂತ್ರ ತೆಳುಕಾರಕದಂತೆ (diuretic) ವರ್ತಿಸುತ್ತದೆ.

ಅಂದರೆ ಇದು ದೇಹದಲ್ಲಿರುವ ನೀರಿನಂಶವನ್ನು ಮೂತ್ರದ ರೂಪದಲ್ಲಿ  ಹೊರಹಾಕಿ, ದೇಹವು ನಿರ್ಜಲೀಕರಣ(dehydration) ವಾಗುವಂತೆ ಮಾಡುತ್ತದೆ.

ಕೇವಲ ಮೂತ್ರ, ಬೆವರು ಮಾತ್ರವಲ್ಲದೆ, ಇವುಗಳ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಬಹಳ ಪ್ರಮುಖ ಖನಿಜಾಂಶಗಳಾದ ಮೆಗ್ನೇಷಿಯಂ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಹಾಗೂ ಜಿಂಕ್‌ ಇತ್ಯಾದಿಗಳೂ ಸಹ ದೇಹದಿಂದ ಹೊರಬೀಳುತ್ತವೆ.

ಈ ಖನಿಜಾಂಶಗಳು ದೇಹದ ದ್ರವಾಂಶದ ಸಂತುಲನ ನಿರ್ವಹಣೆ ಹಾಗೂ ಸ್ನಾಯುಗಳ ಸಂಕುಚನ ಹಾಗೂ ವಿಕಸನಗಳ ನಿರ್ವಹಣೆಯಲ್ಲಿ  ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಪ್ರತಿ ಗ್ರಾಂ ಆಲ್ಕೋಹಾಲ್‌ನಲ್ಲಿ  7 ಕ್ಯಾಲೊರಿಗಳಿದ್ದು, ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಅಂದರೆ, ಇದು ನಿಮ್ಮ ಆಹಾರಕ್ಕೆ ಕೇವಲ ಶೂನ್ಯ ಕ್ಯಾಲೊರಿಗಳನ್ನು ಸೇರಿಸುತ್ತಾ ಹೋಗುತ್ತದೆ.

ಆಲ್ಕೋಹಾಲ್‌ ದೇಹದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ. ಇದರ ಸೇವನೆಯಿಂದ ನಿದ್ದೆ ಬರುತ್ತದೆ, ಆದರೆ ಗಾಢ ನಿದ್ದೆ ಬೀಳುವುದಿಲ್ಲ. ಹೊಟ್ಟೆಯಲ್ಲಿ  ಆಮ್ಲದ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆಯ ಹುಣ್ಣುಗಳು, ಪಿತ್ತಜನಕಾಂಗದ ಕಾಯಿಲೆಗಳು ಹಾಗೂ ಹೃದಯದ ತೊಂದರೆ... ಇತ್ಯಾದಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಆಲ್ಕೋಹಾಲ್‌ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಊಟಕ್ಕೆ ಮೊದಲು ಅಥವಾ ನಂತರ ತೆಗೆದುಕೊಂಡರೂ ಸಹ ದೇಹದ ಶಕ್ತಿ ಹಾಗೂ ಹಸಿವು ಎರಡೂ ಕಡಿಮೆಯಾಗುತ್ತದೆ. ಮದ್ಯಪಾನದ ಜೊತೆ ಸೇವಿಸುವ ಕರಿದ ತಿಂಡಿಗಳು, ಕರಿದ ಗೋಡಂಬಿ... ಇತ್ಯಾದಿಗಳು ನಿಮ್ಮ ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಿಸಿ ನಿಮ್ಮನ್ನು ದಢೂತಿಯನ್ನಾಗಿಸುತ್ತವೆ, ಬಾಯಾರಿಕೆಯೂ ಹೆಚ್ಚುತ್ತದೆ.

ಆಲ್ಕೋಹಾಲಿನ ವಿಪರೀತ ಸೇವನೆಯನ್ನು ತಪ್ಪಿಸಲು, ಮದ್ಯ ಸೇವನೆಯ ಮಧ್ಯದಲ್ಲಿ  ಒಂದೆರಡು ಗ್ಲಾಸ್‌ ನೀರು ಕುಡಿಯಿರಿ.

ಆಲ್ಕೋಹಾಲನ್ನು ಸೇವಿಸಿ ಊಟವನ್ನು ತಪ್ಪಿಸುವುದು ಒಳ್ಳೆಯದಲ್ಲ. ನಿಮ್ಮ  ದೈನಂದಿನ ಆಹಾರವನ್ನು ಸೇವಿಸಿ, ಆ ಮೇಲೆ ಒಂದು ಸಣ್ಣ  ಪ್ರಮಾಣದಲ್ಲಿ  ನೀರು ಅಥವಾ ಸೋಡದ ಜೊತೆಗೆ ಆಲ್ಕೋಹಾಲನ್ನು ಸೇವಿಸಬಹುದು.

ಹೊಟ್ಟೆ ತುಂಬಿದ್ದಾಗ ನಿಮಗೆ ಮತ್ತೆ ಆಲ್ಕೋಹಾಲನ್ನು ಸೇವಿಸುವುದು ಸಾಧ್ಯವಾಗದು.
ಲಿಕ್ಕರ್‌ನ ಸೇವನೆಯು ಆಹಾರ ಸ್ನೇಹಿಯಾಗಿದೆ, ಯಾಕೆಂದರೆ ಇದರಲ್ಲಿ  ಕಾಬೋìಹೈಡ್ರೇಟ್‌ ಅಂಶ ಇಲ್ಲ.

ಆದರೆ ವೈನ್‌ ಹಾಗೂ ಬಿಯರ್‌ಗಳಲ್ಲಿ  ಸ್ವಲ್ಪಾಂಶ ಕಾಬೋìಹೈಡ್ರೇಟ್‌ ಇದೆ. ವೈನ್‌ ಹಾಗೂ ಬಿಯರ್‌ಗಳಿಗಿಂತಲೂ ಲಿಕ್ಕರ್‌ನಲ್ಲಿ  ಕ್ಯಾಲೊರಿಯು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ  ಇದೆ. ಹಾಗಾಗಿ, ಇದನ್ನು ಇನ್ನಿತರ ಶೂನ್ಯ ಕ್ಯಾಲೊರಿ ಇರುವ ಪಾನೀಯಗಳ ಜೊತೆ ಸೇರಿಸಲಾಗುತ್ತದೆ.

ಹಾರ್ಡ್‌ ಲಿಕ್ಕರ್‌ನ ಪ್ರತೀ ಶಾಟ್‌ನಲ್ಲಿ  100 ಕ್ಯಾಲೊರಿಗಳಿದ್ದು, ಇದಕ್ಕೆ ಸೇರಿಸುವ ಮಿಶ್ರಣಕ್ಕೆ ಹೊಂದಿಕೊಂಡು ಇದರ ಕ್ಯಾಲೊರಿಯು ಹೆಚ್ಚುತ್ತದೆ. ಲಿಕ್ಕರ್‌ಗೆ ಯಾವುದನ್ನಾದರೂ ಸೇರಿಸಿ ಸೇವಿಸಬೇಕೆಂದಿದ್ದರೆ, ಬೇರೆ ಇನ್ನಾವುದೇ ಪಾನೀಯಗಳಿಗೆ ಬದಲಾಗಿ ಆಹಾರದ ಸೋಡಾ ಅಥವಾ ಕ್ಲಬ್‌ ಸೋಡಾವನ್ನು ಮಾತ್ರವೇ ಸೇರಿಸಿ.

ಮುಂದಿನ ಸಲ ಆಲ್ಕೋಹಾಲನ್ನು ಸರ್ವ್‌ ಮಾಡಬೇಕೆಂದಿದ್ದಾಗ ಉತ್ತಮವಾದುದನ್ನು ಆರಿಸಿಕೊಳ್ಳಲು, ನಿಮಗೆ ಇಷ್ಟವಾದವುಗಳನ್ನು ಪಟ್ಟಿಯೊಂದಿಗೆ (ಬಾಕ್ಸ್‌ ನೋಡಿ) ಹೋಲಿಸಿ ನೋಡಿ.

ಜನರಲ್ಲಿ  ಜಾಗೃತಿಯನ್ನು ಹುಟ್ಟಿಸುವುದು ಈ ಲೇಖನದ ಉದ್ದೇಶ. ಒಂದು ಮಿತಿ ಯಲ್ಲಿ  ಮದ್ಯಪಾನವು ಆರೋಗ್ಯಕ್ಕೆ ಒಳ್ಳೆಯದು ಎಂದಾದರೆ, ಆ ಮಿತಿ ಯಾವುದು ಮತ್ತು ಹೇಗೆ ಎಂಬುದು ಬಹಳಷ್ಟು  ಜನರ ಪ್ರಶ್ನೆಯಾಗಿತ್ತು. ಹಾಗಾಗಿ, ಯಾರೆಲ್ಲಾ  ನಿತ್ಯವೂ ಮದ್ಯಪಾನ ಮಾಡು ತ್ತಾರೋ, ಅವರಿಗೆ ಈ ಲೇಖನದಿಂದ ಉಪ ಯೋಗವಾಗಬಹುದು ಎಂಬುದು ನನ್ನ ಭಾವನೆ.      
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಸುಧಾ ವಿದ್ಯಾಸಾಗರ್‌,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಕೆಳಬೆನ್ನು ನೋವಿನ ಚಿಕಿತ್ಸೆಯಲ್ಲಿ ಫಿಸಿಯೊತೆರಪಿಯ ಪಾತ್ರ

ಎಸ್‌. ರಾಜಶೇಖರ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಫಿಸಿಯೊ ತೆರಪಿ ವಿಭಾಗ, ಕೆ.ಎಂ.ಸಿ., ಅತ್ತಾವರ, ಮಂಗಳೂರು - 1 
ಈ ದಿನಗಳಲ್ಲಿ ಬೆನ್ನು ನೋವು  ಎಂಬುದು ಬಹಳ ಸಾಮಾನ್ಯ ಅನ್ನಿಸಿಬಿಟ್ಟಿದೆ. ಅದು ಎಷ್ಟು ಸಾಮಾನ್ಯ ಎಂದರೆ ಶೀತ, ಜ್ವರದ ಬಳಿಕ ಬೆನ್ನು ನೋವೇ ಸಾಮಾನ್ಯವಾಗಿ ಅತಿ ಹೆಚ್ಚು ಕಾಡುವ ನೋವು ಅನ್ನಿಸುತ್ತಿದೆ.
ಭಾರತದಲ್ಲಿ ಕೆಳಬೆನ್ನು ನೋವು ಉಂಟು ಮಾಡುವ ವೈಕಲ್ಯತೆಯು ಬಹಳ ಕಳವಳವನ್ನು ಉಂಟು ಮಾಡುತ್ತಿದೆ. ಭಾರತದಲ್ಲಿ ಸುಮಾರು 60%ದಷ್ಟು ಜನರು ತಮ್ಮ ಜೀವನದ ಯಾವುದಾದರೂ ಒಂದು ಸಂದರ್ಭದಲ್ಲಿ ತೀವ್ರ ಬೆನ್ನುನೋವಿನಿಂದ ಬಳಲುತ್ತಾರೆ.


ಒಂದು ಶೇಕಡಾಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕೆಳಬೆನ್ನು ನೋವು  (low back pain (LBP) ಕಾಡಲು ಇರುವ ಕಾರಣಗಳೆಂದರೆ, ಗಡ್ಡೆಗಳು, ಸೋಂಕು ಅಥವಾ ಮುರಿತ. ಸುಮಾರು ಹತ್ತು ಶೇಕಡಾದಷ್ಟು ಸಂದರ್ಭಗಳಲ್ಲಿ ನರಗಳ ಮೂಲದಲ್ಲಿ ಸಂಕುಚನದಿಂದಾಗಿ ಕೆಳಬೆನ್ನು ನೋವು ಕಾಡುತ್ತದೆ.


ಸುಮಾರು ತೊಂಬತ್ತು ಪ್ರತಿಶತದಷ್ಟು ಕೆಳಬೆನ್ನು ನೋವಿನ ಪ್ರಕರಣಗಳು ಬಹಳ ಸಾಮಾನ್ಯ ರೀತಿಯವುಗಳು ಅಥವಾ ಯಾಂತ್ರಿಕ ಬೆನ್ನು ನೋವುಗಳು. ಅಂದರೆ, ಆ ಬೆನ್ನುನೋವುಗಳ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಗಂಭೀರ ರೋಗ ಕಾರಣಗಳಿರುವುದಿಲ್ಲ.

ಯಾಂತ್ರಿಕ ಬೆನ್ನುನೋವು ಅಂದರೆ, ಗುರುತಿಸಬಹುದಾದ ಪ್ರತ್ಯೇಕ ಅಂಶಗಳಿಲ್ಲದೆ (ಸೋಂಕು ಅಥವಾ ಉರಿಯೂತ), ಅಕಾರಣವಾಗಿ  ಕಾಡುವ ಬೆನ್ನು ನೋವು. ಬೆನ್ನು ತಿರುಚುವುದರಿಂದ ಹಾಗೂ / ಅಥವಾ ಅಸಮರ್ಪಕ ರೀತಿಯಲ್ಲಿ ಭಾರ ಎತ್ತುವುದರಿಂದ ಯಾರಿಗಾದರೂ ಯಾಂತ್ರಿಕ ಬೆನ್ನು ನೋವು ಕಾಡಬಹುದು.

ಪೀಠೊಪಕರಣಗಳನ್ನು ಅತ್ತಿತ್ತ ಚಲಿಸುವಾಗ, ವಾಹನ ಚಲಾವಣೆ ಇತ್ಯಾದಿ ಸಂದರ್ಭಗಳಲ್ಲಿ, ಅಸಹಜ ರೀತಿಯಲ್ಲಿ ಬಹಳ ಸಮಯ ಕುಳಿತುಕೊಳ್ಳುವುದರಿಂದ, ಹಾಗೂ ಬಹಳ ಹೊತ್ತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು, ಅಸಮರ್ಪಕ ರೀತಿಯ ಆಟೋಟಗಳು... ಇತ್ಯಾದಿ ಕಾರಣಗಳಿಂದ ಜನರು ಬೆನ್ನು ನೋವಿಗೆ ತುತ್ತಾಗುತ್ತಾರೆ.


ಮಾನವನ ಬೆನ್ನು ಕಶೇರುಗಳೆಂಬ ಸಣ್ಣ ಮೂಳೆಗಳಿಂದಾಗಿದೆ ಹಾಗೂ ಇವು ಪಾರ್ಶ್ವದಲ್ಲಿ ಕಶೇರು ಮಣಿಗಳಿಂದ(Disk) ಬಂಧಿತವಾಗಿವೆ. ಬೆನ್ನು ಮೂಳೆಯಲ್ಲಿ ಮೂರು ವಿಭಿನ್ನ ಭಾಗಗಳಿವೆ.

ಸರ್ವಿಕಲ್‌ ಸ್ಪೈನ್‌ (Cervical), ತೊರಾಸಿಕ್‌ ಸ್ಪೈನ್‌ (thoracic spine) ಹಾಗೂ ಲಂಬಾರ್‌ ಸ್ಪೈನ್‌ (lumbar spine) , ಲಂಬಾರ್‌ ಸ್ಪೈನ್‌ ಅನ್ನು ಕೆಳಬೆನ್ನಿನ ಭಾಗ ಎಂದು ಗುರುತಿಸಲಾಗುತ್ತದೆ.
ಬೆನ್ನು ಮೂಳೆಯ ಬಿಲ್ಲೆಗಳು ಜಾರಿ (slipped disc) ಉಂಟಾಗುವ ಬಿಲ್ಲೆಯ ಸಮಸ್ಯೆಯಿಂದಾಗಿ ಬೆನ್ನುಮೂಳೆಯ ಬಿಲ್ಲೆ ಬಾತುಕೊಂಡು, ಅದು ನರಗಳ ಬೇರಿಗೆ ಕಿರಿ ಕಿರಿ ಉಂಟು ಮಾಡಿ, ಅದರಿಂದ ಕೆಳಬೆನ್ನಲ್ಲಿ ನೋವು ಹುಟ್ಟಿ, ಆ ನೋವು ಬೆನ್ನಿನಿಂದ ತೊಡೆ ಅಥವಾ ಕಾಲಿಗೆ ವರ್ಗಾವಣೆಯಾಗುತ್ತದೆ.


ನರಗಳ ಬೇರಿಗೆ ಕಿರಿಕಿರಿ ಉಂಟಾಗುವ ಕಾರಣದಿಂದಾಗುವ ನೋವಿಗೆ ಸಯಾಟಿಕ (sciatica)ಎಂದು ಹೆಸರು. ನೋವು ಉಂಟಾಗುವ ಇತರ ಕಾರಣಗಳು ಅಂದರೆ, ಪಾರ್ಶ್ವದ ಜೋಡಣೆ ಸ್ನಾಯುಗಳಿಗಾಗುವ ಹಾನಿ ಹಾಗೂ ಅಸ್ಥಿರಜ್ಜುಗಳಲ್ಲಿ ಆಗುವ ಉಳುಕು... ಇತ್ಯಾದಿ.

ಹೀಗೆ ವಿವಿಧ ಕಾರಣಗಳಿಂದಾಗಿ ಉಂಟಾಗುವ ಕೆಳಬೆನ್ನು ನೋವಿನ ಸ್ವರೂಪವೂ ಸಹ ವಿಭಿನ್ನವಾಗಿರುತ್ತದೆ. ಹಾಗಾಗಿ, ಚಿಕಿತ್ಸೆ ಪರಿಣಾಮಕಾರಿಯಾಗಿರಬೇಕಾದರೆ, ಕೆಳಬೆನ್ನು ನೋವಿನಿಂದ ಬಳಲುವ ಪ್ರತಿ ರೋಗಿಯ ಸಮಸ್ಯೆಯ ಮೂಲವನ್ನು ಗುರುತಿಸುವುದು ಅತ್ಯಗತ್ಯ.

ಕೆ.ಎಂ.ಸಿ. ಮಂಗಳೂರಿನ, ಫಿಸಿಯೋತೆರಪಿ ವಿಭಾಗದಲ್ಲಿ, ಪ್ರಸ್ತುತ ಲಭ್ಯವಿರುವ ವೈಜ್ಞಾನಿಕ ವಿಧಾನ ಹಾಗೂ ಸರಳ ವೈದ್ಯಕೀಯ ತಪಾಸಣಾ ವಿಧಾನಗಳ ಮೂಲಕ ನಾವು ಪ್ರತೀ ರೋಗಿಗಳ ಸಮಸ್ಯೆಗಳನ್ನು ಗುರುತಿಸುತ್ತೇವೆ. ಬೆನ್ನುನೋವಿನ ಹಿನ್ನೆಲೆಯ ಕಾರಣ ಪತ್ತೆಯಾದರೆ, ಆ ಮೇಲೆ ಅಗತ್ಯವಿರುವ ಚಿಕಿತ್ಸೆಗಳನ್ನು ನೀಡ‌ಲಾಗುತ್ತದೆ.


ಕೆಳಬೆನ್ನಿನ ನೋವಿನಲ್ಲಿ, ತೀವ್ರ ಹಾಗೂ ಹೆಚ್ಚು  ತೀವ್ರ ನೋವು ಎಂಬುದಾಗಿ ಎರಡು ಹಂತಗಳಿವೆ. ನಾಲ್ಕು ವಾರಗಳಿಂದ ನೋವಿನ ಬಾಧೆ ಇದ್ದರೆ ಅದು ತೀವ್ರ ರೀತಿಯದ್ದು, ನಾಲ್ಕು ವಾರಕ್ಕಿಂತಲೂ ಹೆಚ್ಚು ಸಮಯದಿಂದ ಬಾಧಿಸುತ್ತಿರುವ ನೋವು ಹೆಚ್ಚು ತೀವ್ರ ರೂಪದ್ದಾಗಿರುತ್ತದೆ.

ಒಂದು ವೇಳೆ ಹಿಂದಿನ ಮೂರು ತಿಂಗಳುಗಳಿಂದ ಬೆನ್ನು ನೋವು ಸತತವಾಗಿ ಪೀಡಿಸುತ್ತಿದ್ದರೆ, ಅಥವಾ ವರ್ಷದಲ್ಲಿ ಮೂರಕ್ಕಿಂತ ಹೆಚ್ಚು ಸಲ ಕೆಳಬೆನ್ನು ನೋವು ಸತತವಾಗಿ ಬಾಧಿಸಿದರೆ, ಆ ಜನರಿಗೆ ದೀರ್ಘ‌ಕಾಲಿಕ ಬೆನ್ನುನೋವು ಇದೆ ಎಂದು ತಿಳಿಯಬಹುದು.

ತೀವ್ರ ಬೆನ್ನು ನೋವಿನ ಚಿಕಿತ್ಸೆಯ ಮೊದಲ ಗುರಿ ಎಂದರೆ, ಬೆನ್ನು ನೋವಿನ ತೀವ್ರತೆಯ ಮರುಕಳಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಡಿಮೆಗೊಳಿಸುವುದು. ರೋಗಿಗೆ ವ್ಯಾಯಾಮ ಹಾಗೂ ನಿರ್ವಹಣಾ ತಿಳಿವಳಿಕೆಯನ್ನು ನೀಡುವ ಮೂಲಕ ಇದನ್ನು ಸಾಧಿಸಬಹುದು.


ಆದರೆ, ಈ ಬೆನ್ನು ನೋವನ್ನು ಅಲಕ್ಷಿಸಿದರೆ ಅಥವಾ ಅಸಮರ್ಪಕ ಚಿಕಿತ್ಸೆ ನೀಡಿದರೆ, ಅಸಮರ್ಪಕವಾಗಿ ನಿರ್ವಹಿಸಿದರೆ (ಅಂದರೆ ತಪ್ಪು ಸಲಹೆಗಳು, ಅಸಮರ್ಪಕ ವ್ಯಾಯಾಮ, ಔಷಧಿ... ಇತ್ಯಾದಿ) ಕೆಳಬೆನ್ನಿನ ನೋವು, ಮರುಕಳಿಸುವ ಹಾಗೂ ಉಲ್ಬಣವಾಗುವ ಸಾಧ್ಯತೆ ಹೆಚ್ಚು ಇದೆ.

ಕೆಳ ಬೆನ್ನಿನ ನೋವು ದೀರ್ಘ‌ಕಾಲಿಕವಾಗಲು ಇರುವ ಪ್ರಮುಖ ಕಾರಣ ಎಂದರೆ, ನೋವಿರುವ ರೋಗಿಗಳು ಸಂಪೂರ್ಣ ಅಂದರೆ ವಾರಗಟ್ಟಲೆ ವಿಶ್ರಾಂತಿ ತೆಗೆದುಕೊಳ್ಳುವುದು. ಒಂದು ಅಥವಾ ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳುವುದು ಸರಿ.

ಆದರೆ ಅದಕ್ಕಿಂತ ಹೆಚ್ಚು ದಿನಗಳ ಕಾಲ ವಿಶ್ರಾಂತಿ (bed rest) ತೆಗೆದುಕೊಂಡರೆ, ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ವಾರ ಅಥವಾ ತಿಂಗಳುಗಟ್ಟಲೆ ತೆಗೆದುಕೊಳ್ಳುವ ವಿಶ್ರಾಂತಿಯು ನೋವನ್ನು ದೀರ್ಘ‌ಗೊಳಿಸುತ್ತದೆ.

ದೇಹವು ಪೆಡಸಾಗುತ್ತದೆ, ಸ್ನಾಯುಗಳು ದುರ್ಬಲವಾಗುತ್ತವೆ, ಮೂಳೆಗಳೂ ದುರ್ಬಲವಾಗುತ್ತವೆ; ರೋಗಿಯು ದೈಹಿಕ ಕ್ಷಮತೆಯನ್ನು ಕಳೆದುಕೊಂಡು ಖನ್ನರಾಗುತ್ತಾರೆ. ಕ್ರಮೇಣ ಹಿಂದಿನ ಸ್ಥಿತಿಗೆ ಮರಳಲು ಬಹಳ ಕಷ್ಟವಾಗುತ್ತದೆ.

ಕೆ.ಎಂ.ಸಿ. ಫಿಸಿಯೋತೆರಪಿ ವಿಭಾಗದಲ್ಲಿ ನಾವು ನಮ್ಮ ರೋಗಿಗಳಿಗೆ ನೀಡುವ ಸಲಹೆ ಏನೆಂದರೆ, ನಿಮಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹಾಸಿಗೆಯಿಂದ ಎದ್ದೇಳಿ. ""ನೋವಿನಿಂದ ಈಚೆ ಬಂದ ನಂತರ, ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ನೀವೇ ಮಾಡಲು ಪ್ರಯತ್ನಿಸಿ'.

ನಡಿಗೆಯಂತಹ ಲಘು ವ್ಯಾಯಾಮಗಳು ನಿಮಗೆ ಚೈತನ್ಯವನ್ನು ಒದಗಿಸುತ್ತವೆ.

ಕೆಳ ಬೆನ್ನಿನ ನೋವಿನ ಬಗ್ಗೆ  ಇರುವ ತೀವ್ರ ಹೆದರಿಕೆಯೂ ಸಹ ಈ ನೋವು ಉಲ್ಬಣಗೊಳ್ಳಲು ಇರುವ ಅಪಾಯಕಾರಿ ಅಂಶ. ಇದು ಇರುವ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ದಯವಿಟ್ಟು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ. ""ಬೆನ್ನು ನೋವು ಒಂದು ಮಾಮೂಲಿ ಸಮಸ್ಯೆ' ಎಂಬ ಮಾತನ್ನು ನಿಮಗೆ ನೀವೇ ಹೇಳಿಕೊಳ್ಳಿ.

ಮೂರನೆಯ ಅಪಾಯಕಾರಿ ಅಂಶ ಎಂದರೆ, ಮೂಲ ಸ್ನಾಯುವಿನ ಕ್ಷಮತೆಯು ಕುಸಿದಿರುವುದು (core muscle endurance) ಅಂದರೆ, ಸಾಮರ್ಥ್ಯದ ಕೊರತೆ. ""ಮೂಲ' ಅಂದರೆ ನಮ್ಮ ದೇಹದ ಕೇಂದ್ರ ಭಾಗ.

ಕೇಂದ್ರ ಭಾಗದ ಸುತ್ತಲಿನ ಸ್ನಾಯುಗಳಿಗೆ (ಹೊಟ್ಟೆಯ ಸ್ನಾಯುಗಳು, ಬೆನ್ನಿನ ಸ್ನಾಯುಗಳು ಹಾಗೂ ಸೊಂಟದ ಸ್ನಾಯುಗಳು) ಮೂಲ ಸ್ನಾಯುಗಳು ಎಂದು ಹೆಸರು. ಕೆಳಬೆನ್ನಿಗೆ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು, ಮೂಲ ಸ್ನಾಯುಗಳನ್ನು ಬಲಪಡಿಸಲು ನುರಿತ ಫಿಸಿಯೋತೆರಪಿಸ್ಟ್‌ಗಳಿಂದ ತರಬೇತಿಯನ್ನು ಪಡೆಯಬಹುದು.

ಸಾಮಾನ್ಯವಾಗಿ ಕುಳಿತು ಏಳುವ ಹಾಗೂ ಬೆನ್ನನ್ನು ತಿರುಗಿಸುವ/ತಿರುಚುವ ವ್ಯಾಯಾಮಗಳನ್ನು ಮಾಡದಿರಲು ಸೂಚಿಸಲಾಗುತ್ತದೆ. ಯಾಕೆಂದರೆ, ಮತ್ತೆ ಬೆನ್ನುಮೂಳೆ ಬಾಗಿದಂತಾಗಿ, ಮೂಳೆಯ ಬಿಲ್ಲೆಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.

ನಿಮ್ಮ ಕೆಳ ಬೆನ್ನಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದೆ, ನಿಮ್ಮ ದೇಹದ ಮೂಲ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುವ ಸುಲಭ ಹಾಗೂ ಸರಳ ರೀತಿಯ ವ್ಯಾಯಾಮಗಳನ್ನು, ಕೆ.ಎಂ.ಸಿ. ಮಂಗಳೂರಿನ ಫಿಸಿಯೋತೆರಪಿ ವಿಭಾಗದಲ್ಲಿ ನಾವು ಕಲಿಸಿಕೊಡುತ್ತೇವೆ.

ಮೂಲ ಸ್ನಾಯುಗಳಿಗೆ ಸಂಬಂಧಿಸಿದಂತೆ ಇಲ್ಲಿ ಕೆಲವು ಸರಳ ವ್ಯಾಯಾಮಗಳಿವೆ. ಈ ವ್ಯಾಯಾಮಗಳ ಮೂಲಕ ನೀವು ನಿಮ್ಮ ಕೆಳ ಬೆನ್ನನ್ನು ಸದೃಢವಾಗಿಸಿ, ಕೆಳ ಬೆನ್ನಿನ ನೋವನ್ನು ದೂರವಿರಿಸಬಹುದು.

1. ಬಾಗುವ ಹಾಗೂ ಬಿಲ್ಲಿನ ವ್ಯಾಯಾಮ (the arch and curl exercise)
ಇದು ಚಾಚುವಿಕೆಯ ವ್ಯಾಯಾಮ ಅಲ್ಲದಿದ್ದರೂ, ಚಲನೆಯನ್ನು ಉತ್ತೇಜಿಸುವ ವ್ಯಾಯಾಮವಾಗಿದೆ. ಚತುಷ್ಪಾದದ ಭಂಗಿಯಲ್ಲಿ (ಮೊಣಕಾಲು ಹಾಗೂ ಅಂಗೈಗಳಿಂದ ಮಂಡಿಯೂರುವುದು) ಈ ವ್ಯಾಯಾಮವನ್ನು ಆರಂಭಿಸಿ, ನಂತರ ಬೆನ್ನು ಮೂಳೆಯನ್ನು ಮೇಲಕ್ಕೆ ಅಲೆಯಂತೆ ಎತ್ತರಿಸಬೇಕು (ಚಿತ್ರ

1). ನಂತರ ಕೆಳಕ್ಕೆ ಬಿಲ್ಲಿನಂತೆ ಬಾಗಿಸಬೇಕು (ಚಿತ್ರ 2). ಈ ವ್ಯಾಯಾಮವನ್ನು 5-8 ಬಾರಿ ಮಾಡಿ. ಹರ್ನಿಯೇಟೆಡ್‌ ಡಿಸ್ಕ್ ಹಾಗೂ ಸಯಾಟಿಕ ತೊಂದರೆ ಇರುವವರು ಈ ವ್ಯಾಯಾಮದ ಮೊದಲ ಭಾಗವನ್ನು ಮಿತಿಯಲ್ಲಿ ಮಾಡಬೇಕು. ನೋವು ಇರುವಾಗ ವ್ಯಾಯಾಮ ಮಾಡಬೇಡಿ.
2.ಕರ್ಲ್ ಅಪ್‌ ವ್ಯಾಯಾಮ Curl up exercise
ಇದು ಹೊಟ್ಟೆಯ ಸ್ನಾಯುಗಳಿಗೆ ಕ್ಷಮತೆಯನ್ನು ನೀಡಿ ಬೆನ್ನಿನ ಲಂಬಾರ್‌ ಡಿಸ್ಕ್ ಅನ್ನು ರಕ್ಷಿಸುವ ವ್ಯಾಯಾಮವಾಗಿದೆ. ಕೆಳಬೆನ್ನಿನ ಅಡಿಯಲ್ಲಿ ನಿಮ್ಮ ಅಂಗೈ ಅಥವಾ ಬಟ್ಟೆಯನ್ನು ಇರಿಸಿ ಬೆನ್ನಿನ ಮೇಲೆ ಮಲಗಿ.

ಈ ಭಂಗಿಯಿಂದ ಬೆನ್ನಿನ ಆ ಭಾಗದ ಅಂದರೆ ಲಂಬಾರ್‌ ಡಿಸ್ಕಿನ ಸಹಜ ಬಾಗುವಿಕೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಒಂದು ಮೊಣಕಾಲು ಬಾಗಿರುವಾಗ, ಮತ್ತೂಂದು ಕಾಲು ನೇರವಾಗಿರಬೇಕು. ಇದೇ ರೀತಿ ಮತ್ತೂಂದು ಕಾಲಲ್ಲೂ ಮಾಡುತ್ತಾ ವ್ಯಾಯಾಮವನ್ನು ಪುನರಾವರ್ತಿಸಬೇಕು. (ಚಿತ್ರ 3).
3. ಪರ್ಯಾಯವಾಗಿ ಕೈ-ಕಾಲುಗಳನ್ನು ಚಾಚುವುದು (Alternating arm and leg raising (bird dog)

ಮೊಣಕಾಲೂರಿಕೊಂಡು, ಮೂಲ ಸ್ನಾಯುಗಳನ್ನು ಸಂಕುಚನಗೊಳಿಸುತ್ತಾ, ಒಂದು ಕಾಲನ್ನು ಮೇಲೆತ್ತಿ ಹಾಗೂ ಅದರ ವಿರುದ್ಧ ದಿಕ್ಕಿನ ಒಂದು ಕೈಯನ್ನೂ ಮುಂದಕ್ಕೆ ಚಾಚಿ, ಇವೆರಡೂ ನೆಲಕ್ಕೆ ಸಮಾಂತರವಾಗಿರಲಿ.

ಇದೇ ಭಂಗಿಯಲ್ಲಿ 8 ಸೆಕೆಂಡುಗಳ ವರೆಗೆ ಹೀಗೆ ಇರಿ. ಬೆನ್ನಿನ ಕ್ಷಮತೆಯು ಹೆಚ್ಚಾದಂತೆಲ್ಲಾ ಈ ವ್ಯಾಯಾಮದ ಅವಧಿ ಹಾಗೂ ಆವರ್ತನೆಯನ್ನು ಹೆಚ್ಚಿಸಬಹುದು (ಚಿತ್ರ 4).
4. ಸೈಡ್‌ ಬ್ರಿಜ್‌ ವ್ಯಾಯಾಮ (Side Bridge)

ನಿಮ್ಮ ದೇಹದಿಂದ ಒಂದು ಸೇತುವೆಯನ್ನು ಮಾಡಿ, ನಿಮ್ಮ ಕಾಲುಗಳು ದೇಹದ ಕೆಳ ಭಾಗವನ್ನು ಆಧರಿಸಿರಲಿ. ನಿಮ್ಮ ಮೇಲಿನ ಪಾದವು ಕೆಳಪಾದದ ಮುಂದಿರಬೇಕು. ನಿಮ್ಮ ಹೊಟ್ಟೆ ಹಾಗೂ ಬೆನ್ನಿನ ಸ್ನಾಯುಗಳನ್ನು ಗಟ್ಟಿಗೊಳಿಸಿ, ಬೆನ್ನು ಮೂಳೆಯನ್ನು ನೇರವಾಗಿರಿಸಲು ಪ್ರಯತ್ನಿಸಿ.

ಇದೇ ಭಂಗಿಯಲ್ಲಿ 8 ಸೆಕೆಂಡುಗಳ ಕಾಲ ಇರಿ. ಎರಡೂ ಬದಿಗಳಲ್ಲೂ ಈ ವ್ಯಾಯಾಮವನ್ನು ನಡೆಸಬೇಕು. ಈ ವ್ಯಾಯಾಮ ಮಾಡಲು ಮೊಣಕಾಲು ಹಾಗೂ ಮೊಣಕೈಗಳು ಸ್ವಲ್ಪ ಮಟ್ಟಿಗೆ ದೃಢವಾಗಿರಬೇಕಾದುದು ಆವಶ್ಯಕ (ಚಿತ್ರ 5, 6)
5. ಪ್ಲಾಂಕಿಂಗ್‌ ವ್ಯಾಯಾಮ (Planking)
ಅಂಗಾಲಿನ ಮುಂಭಾಗ ಹಾಗೂ ಮೊಣಕೈಯನ್ನು ಆಧರಿಸಿ ಇಡೀ ದೇಹವನ್ನು ಹಲಗೆಯ ರೀತಿಯಲ್ಲಿ ಗಡಸುಗೊಳಿಸುವುದು. ಗಡಸುಗೊಳಿಸುವ ಭಂಗಿಯಲ್ಲಿ ಬೆನ್ನು ಹಾಗೂ ಹೊಟ್ಟೆಯ ಸ್ನಾಯುಗಳನ್ನು ಗಟ್ಟಿಯಾಗಿಸಲು ಗಮನವಿರಿಸಿ.

ಇದಕ್ಕಾಗಿ 8 ಸೆಕೆಂಡ್‌ಗಳ ಕಾಲ ಸಂಕುಚನದ ಸ್ಥಿತಿಯಲ್ಲಿರಿ. ವ್ಯಾಯಾಮದ ಆವರ್ತನೆಗಳನ್ನು ನಿಧಾನವಾಗಿ ಹೆಚ್ಚಿಸುತ್ತಾ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಿ (ಚಿತ್ರ 7).
ಎಚ್ಚರಿಕೆ
ನಿಮಗೆ ತೀವ್ರ ನೋವು ಬಾಧಿಸುತ್ತಿರುವಾಗ ಮೇಲೆ ಹೇಳಿದಂತಹ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸದಿರಿ. ವ್ಯಾಯಾಮವನ್ನು ಯಾವಾಗ ಆರಂಭಿಸಬೇಕು ಹಾಗೂ ಹೇಗೆ ಮುಂದುವರಿಸಬೇಕು ಎಂಬುದನ್ನು ತಿಳಿಯಲು ಫಿಸಿಯೋತೆರಪಿಸ್ಟ್‌ ಹತ್ತಿರ ಸಲಹೆಯನ್ನು ಪಡೆದುಕೊಳ್ಳಿ.
ಕೆಳಬೆನ್ನು ನೋವು ಬರದಂತೆ ಹೇಗೆ ತಡೆಯಬಹುದು ? ಹೀಗೆ ಮಾಡಿ
*ಬಿರುಸಿನ ನಡಿಗೆ, ಸೈಕ್ಲಿಂಗ್‌ ಹಾಗೂ ಈಜುವಿಕೆಯಂತಹ ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ.

*ಧೂಮಪಾನವನ್ನು ಬಿಟ್ಟು ಬಿಡಿ.

*ಬೊಜ್ಜು ಇದ್ದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ.

*ಮೊದಲು ನಿಮ್ಮ ಸೊಂಟ ಹಾಗೂ ಮೊಣಗಾಲುಗಳನ್ನು ಬಗ್ಗಿಸಿ, ಆಮೇಲೆ ಕುಳಿತು ವಸ್ತುಗಳನ್ನು ಎತ್ತಿಕೊಳ್ಳಿ.

*ನಿಮ್ಮ ಆಫೀಸಲ್ಲಿ ಅಥವಾ ವಾಹನ ಚಲಾಯಿಸುವಾಗ ಬಹಳ ಸಮಯದಿಂದ ಕುಳಿತೇ ಇದ್ದರೆ, ಮಧ್ಯೆ ಮಧ್ಯೆ ಕಾಲು ಚಾಚಿಕೊಳ್ಳಿ, ನೀವು ಕುಳಿತಿರುವ ಭಂಗಿಯನ್ನು ಬದಲಾಯಿಸಿಕೊಳ್ಳಿ.
ಹೀಗೆ ಮಾಡದಿರಿ:
*ಬಗ್ಗಿಕೊಂಡು, ನಿಂತಿರುವ ಭಂಗಿಯಲ್ಲಿ ಭಾರವಾದ ವಸ್ತುಗಳನ್ನು ಎತ್ತಲು ಪ್ರಯತ್ನಿಸಬೇಡಿ.

*ಭಾರವನ್ನು ಎತ್ತುವಾಗ ದೇಹವನ್ನು ತಿರುಚಬೇಡಿ.
ನಿಮಗೆ ತೀವ್ರ ಸ್ವರೂಪದ ಬೆನ್ನುನೋವಿದೆ ಎಂದು ಯಾವಾಗ ಹೇಳಬಹುದು ?
*ತೀವ್ರ ಜಖಂ ಅಥವಾ ಅಪಘಾತದ ಕಾರಣದಿಂದಾಗಿ ಬೆನ್ನುನೋವು ಕಾಡುತ್ತಿದ್ದರೆ

*ನಿಮಗೆ ಮೂತ್ರವಿಸರ್ಜನೆ ಕಷ್ಟವಾಗುತ್ತಿದ್ದರೆ ಅಥವಾ ಮಲವಿಸರ್ಜನೆಯು ಅನಿಯಂತ್ರಿಯವಾಗಿದ್ದರೆ
ಅಕಾರಣವಾಗಿ, ಅಂದರೆ ಆಹಾರ ಪಥ್ಯವಿಲ್ಲದೆ, ಚಳಿ-ಜ್ವರವಿಲ್ಲದೆ ಅಥವಾ ಕ್ಯಾನ್ಸರ್‌ ಹಿನ್ನಲೆ
ಇಲ್ಲದೆ ನಿಮ್ಮ ದೇಹದ ತೂಕ ಕಡಿಮೆಯಾದರೆ.

*ರಾತ್ರಿ ಸಮಯದಲ್ಲಿ ನೋವು ಸತತವಾಗಿ ಬಾಧಿಸುತ್ತಿದ್ದರೆ, ಅಂದರೆ ಮಲಗಿರುವ ಭಂಗಿಯನ್ನು ಬದಲಾಯಿಸಿದರೂ ಸಹ ನೋವು ಕಡಿಮೆಯಾಗದಿದ್ದರೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಅರುಣ್‌ ಮಯ್ಯ,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು , ಫಿಸಿಯೊ ತೆರಪಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ವೃದ್ಧಾಪ್ಯದ ಸಂಧಿವಾತ


ಡಾ| ಕಿರಣ್‌ ಆಚಾರ್ಯ, ಅಸೊಸಿಯೇಟ್‌ ಪ್ರೊಫೆಸರ್‌, ಯುನಿಟ್‌ 4 ,  ಮೂಳೆರೋಗಗಳ ಚಿಕಿತ್ಸಾ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.
ಏನಿದು ಸಂಧಿವಾತ?

ಸಂಧಿವಾತವು ಶರೀರದ ಕೀಲುಗಳ (ಕೀಲು =ಸಂಧು = joint) ಮೇಲೆ ಪರಿಣಾಮ ಉಂಟು ಮಾಡುವ ಒಂದು ರೋಗಲಕ್ಷಣವಾಗಿದ್ದು, ವಯಸ್ಸಾದಂತೆ ತೀವ್ರವಾಗುತ್ತದೆ. ಕೂದಲು ಉದುರುವಂತೆ, ನೆರೆದಂತೆ, ಚರ್ಮ ಸುಕ್ಕಾದಂತೆ, ಸಂಧಿವಾತ ಕೂಡ ವಯಸ್ಸಾದಂತೆ ಕಾಣಿಸಿಕೊಳ್ಳುವ  ಒಂದು ಸಾಮಾನ್ಯ ತೊಂದರೆ. ಮೊಣಕಾಲು (knee) ಸೊಂಟ, ಭುಜ (shoulder) ಮುಂತಾದ ಕೀಲುಗಳಲ್ಲಿ ಹಾಗೂ ಕೈಯ ಸಣ್ಣ ಕೀಲುಗಳಲ್ಲಿ ಇದರ ಪ್ರಭಾವ ಜಾಸ್ತಿ.
ಸಂಧಿ/ಕೀಲು

ಎರಡು ಅಥವಾ ಹೆಚ್ಚು ಎಲುಬುಗಳು ಸಂಧಿಸುವ ಸ್ಥಳ. ಚಲನವಲನಕ್ಕೆ ಹಾಗೂ ನಡೆದಾಡಲು ಇಂತಹ ಜೋಡಣೆಗಳು ಆವಶ್ಯಕ. ಎಲುಬುಗಳು ಸಂಧಿಸುವ ಸ್ಥಳದಲ್ಲಿ ಮೃದ್ವಸ್ಥಿ (cartilage) ಎಂಬ ಮೃದುವಾದ, ನಯವಾದ ಪದರ ಆವರಿಸಿಕೊಂಡಿರುತ್ತದೆ. ಎಣ್ಣೆಯಂತಹ ಸೈನೋವಿಯಲ್‌ ದ್ರವ ಅಲ್ಲಿ ಘರ್ಷಣೆಯಿಲ್ಲದೆ ಕೀಲು ಚಲಿಸುವಂತೆ ಮಾಡುತ್ತದೆ.
ಕೀಲುಗಳೇಕೆ ಸವೆಯುತ್ತವೆ?

ಕೀಲುಗಳ ಮೃದ್ವಸ್ಥಿ - ವಯಸ್ಸಾದಂತೆ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ.
ಪುನರಾವರ್ತನೆಯಾಗುವ ಚಲನವಲನಗಳಿಂದ ಕ್ರಮೇಣ ದೊರಗಾಗಿ, ಒಡೆಯಲು ಆರಂಭಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸ್ನಾಯುಗಳು ಬಿಗುಗೊಂಡು, ಕೀಲಿನ ಚಲನೆ ಕುಂಠಿತವಾಗುತ್ತದೆ.

ಕಾರಣಗಳು - ಹೆಚ್ಚುತ್ತಿರುವ ವಯಸ್ಸಿನ ಜೊತೆ ಕೀಲು ಸವೆತ, ಅತಿಯಾದ ದೇಹತೂಕ - ಬೊಜ್ಜು, ವೃತ್ತಿ ಹಾಗೂ ಜೀವನ ಶೈಲಿ. ಉದಾ: ದಿನವೂ ಹಲವು ಬಾರಿ ಮೆಟ್ಟಿಲೇರುವುದು, ನಿಂತೇ ಇರುವುದು, ಕೀಲುಗಳ ಅತಿಯಾದ ಉಪಯೋಗ.

ಅಪಘಾತ: ಮೂಳೆ ಮುರಿತದ ಜೊತೆಗೆ ಕೀಲಿನ ಮೃದ್ವಸ್ಥಿಗೆ ಆಘಾತ.

ಕ್ರೀಡಾಳುಗಳು: ಕೀಲುಗಳ ಅತಿಯಾದ ಬಳಕೆ, ಪುನರಾವರ್ತನೆಯಾಗುವ ಆಘಾತಗಳು.

ಊನಗಳು: ವಯಸ್ಸಾದಂತೆ ಬಾಗುವ ಕಾಲುಗಳು ಬೇಗನೆ ಸವೆಯುತ್ತವೆ.

ಇತರ ವಾತವ್ಯಾಧಿಗಳು: ರುಮಟಾಯ್ಡ ಕಾಯಿಲೆ, ಗೌಟ್‌... ಇತ್ಯಾದಿ.
ಸಂಧಿವಾತದ ಎಚ್ಚರಿಕೆಯ ಕರೆಗಂಟೆ: ಲಕ್ಷಣಗಳು ಹಂತ ಹಂತವಾಗಿ ಹೆಚ್ಚಾಗುತ್ತವೆ

*ಕೀಲಿನಲ್ಲಿ  ಬಿಗುಪು/ಸೆಳಕು: ಹಾಸಿಗೆಯಿಂದ ಏಳುವಾಗ, ಬಹಳ ಹೊತ್ತು ಕುಳಿತು ಮೇಲೆ ಏಳುವಾಗ ಕೀಲುಗಳಲ್ಲಿ ಬಿಗುಪು (stiffness).

*ಕೀಲುನೋವು: ಸಂಜೆಯಾದಂತೆ, ದಿನಗಳೆದಂತೆ, ಮೊಣಕಾಲಿನಲ್ಲಿ ನೋವು, ಮೆಟ್ಟಲೇರುವಾಗ, ಇಳಿಯುವಾಗ, ನೆಲದಲ್ಲಿ ಕುಳಿತುಕೊಳ್ಳುವಾಗ, ದೂರ ನಡೆದಂತೆ ಹೆಚ್ಚಾಗುವ - ವಿರಮಿಸಿದಾಗ ಕಡಿಮೆಯಾಗುವ ನೋವು.

*ಸಂಧಿಯೊಳಗೆ ಶಬ್ದ  (crepitus): ಸವೆದ ಕಾರ್ಟಿಲೇಜ್‌ ದೊರಗಾಗುತ್ತದೆ. ದೊರಗಾದ ಎರಡು ಎಲುಬಿನ ತುದಿಗಳು ಒಂದನ್ನೊಂದು ಸ್ಪಂದಿಸಿದಾಗ, ಕರಕರನೆ ಶಬ್ದವಾದಂತೆ ಭಾಸವಾಗುತ್ತದೆ.
ಸಂಧಿವಾತವನ್ನು ಗುರುತಿಸುವುದು ಹೇಗೆ?

ಸಂಧಿವಾತಕ್ಕೆಂದೇ ಪರೀಕ್ಷೆ ಎಂಬುದು ಇಲ್ಲ. ವೈದ್ಯಕೀಯ ಹಿನ್ನಲೆ, ದೇಹ ತಪಾಸಣೆಗಳಿಂದ ಸಂಧಿವಾತದ ಕಾರಣಗಳನ್ನು ಪತ್ತೆಹಚ್ಚಬಹುದು. ಕ್ಷ-ಕಿರಣ ಮಾಡುವುದರಿಂದ ಸವೆತದ ತೀವ್ರತೆಯನ್ನು ಕಂಡುಹಿಡಿಯಬಹುದು. ರಕ್ತ ಪರೀಕ್ಷೆ ನಡೆಸಿ ಸಂಧಿವಾತದ ಇತರ ಕಾರಣಗಳನ್ನು ಪತ್ತೆ ಹಚ್ಚಲು ಸಾಧ್ಯ.
ಜೀವನ ಶೈಲಿ ಬದಲಾವಣೆ

ವೃತ್ತಿಜನ್ಯ ಕೀಲುನೋವಿನಲ್ಲಿ, ಜೀವನ ಶೈಲಿ/ ವೃತ್ತಿ ಬದಲಾವಣೆ ಅಗತ್ಯ. ಅನಾವಶ್ಯಕ ಚಲನವಲನ (ಉದಾ: ಮೆಟ್ಟಲೇರುವುದು, ನೆಲದ ಮೇಲೆ ಕುಳಿತುಕೊಳ್ಳುವುದು) ಹಾಗೂ ಹಾನಿಕಾರಕ ಚಲನವಲನಗಳನ್ನು ನಿಲ್ಲಿಸಿದರೆ, ಕೀಲಿನ ಆಯಸ್ಸು ವೃದ್ಧಿಯಾಗುತ್ತದೆ. ಹೊತ್ತಿಗೆ ಸರಿಯಾಗಿ ಸಂತುಲಿತ‌ ಆಹಾರ ಸೇವನೆಯಿಂದ ದೇಹತೂಕ ಕಾಪಾಡಿಕೊಳ್ಳಬಹುದು.
ವ್ಯಾಯಾಮ

ಕೀಲುಗಳ ಸ್ನಾಯುಗಳ ಶಕ್ತಿ ಹೆಚ್ಚಿಸುವುದರಿಂದ, ಚಲನವಲನ ಕಾಯ್ದುಕೊಳ್ಳುವ ವ್ಯಾಯಾಮ ಮಾಡುವುದರಿಂದ ಕೀಲುಗಳ ಆರೋಗ್ಯ ಹೆಚ್ಚುವುದು. ಶಸ್ತ್ರಚಿಕಿತ್ಸೆಯ ಪೂರ್ವಭಾವಿ ತಯಾರಿಯಾಗಿ ವ್ಯಾಯಾಮಗಳನ್ನು  ನಡೆಸಿದಲ್ಲಿ, ಫ‌ಲಿತಾಂಶ ಚೆನ್ನಾಗಿರುತ್ತದೆ. ದೈನಂದಿನ ಚಟುವಟಿಕೆ ಮುಂದುವರಿಸುವಲ್ಲಿ ಕೂಡ ವ್ಯಾಯಾಮಗಳು ಸಹಕಾರಿ.
ಔಷಧಿ ರಹಿತ ನೋವು ನಿವಾರಣೆ
ಬಿಸಿ ಹಾಗೂ ತಂಪಿನ ಸಂಯೋಜಿತ ಚಿಕಿತ್ಸೆ, ಮಸಾಜ್‌, ತೈಲ ಅಭ್ಯಂಜನ, ಲೇಸರ್‌, ಇನ್‌ಫ್ರಾರೆಡ್‌ ಕಿರಣ ಹಾಗೂ ಇತರ ಫಿಸಿಯೋತೆರಪಿ ವಿಧಾನಗಳು ಉತ್ತಮ ನೋವು ನಿವಾರಣೆ ನೀಡುತ್ತವೆ.
ಮೊಣಕಾಲಿನ ಬ್ರೇಸ್‌
ನೋವಿಲ್ಲದೆ, ಆತ್ಮವಿಶ್ವಾಸದಿಂದ ನಡೆದಾಡಲು ಉಪಯೋಗಿ. ಬ್ರೇಸ್‌ ಬಳಸುವುದರಿಂದ ಕೀಲಿನ ಅನವಶ್ಯಕ ಚಲನ ನಿಯಂತ್ರಣ ಸಾಧ್ಯ. ವೈದ್ಯರ ಸಲಹೆ ಇಲ್ಲದೆ, ಸಾಮಾನ್ಯ ಮಾರುಕಟ್ಟೆಯಲ್ಲಿ  ಲಭ್ಯವಿರುವ ಅವೈಜ್ಞಾನಿಕ  'knಛಿಛಿ cಚಟ' ಬಳಸದಿರುವುದು ಉತ್ತಮ.
ಊರುಗೋಲು
ಎರಡೂ ಕಾಲುಗಳಲ್ಲಿ ಕೀಲು ನೋವಿದ್ದು, ನಡೆಯುವ ಧೈರ್ಯ ಇಲ್ಲದಿದ್ದಲ್ಲಿ , ಊರುಗೋಲು ಬಳಕೆ ಅನಿವಾರ್ಯ.
ಕೀಲುನೋವು ಹಾಗೂ ಔಷಧಿ: (ತಜ್ಞ ವೈದ್ಯರ ಸಲಹೆ ಅಗತ್ಯ)

*ನೋವು ನಿವಾರಕ: 
ನೋವಿನ ತಾತ್ಕಾಲಿಕ ಶಮನಕ್ಕಾಗಿ ಬಹಳಷ್ಟು ಔಷಧಿಗಳು ಲಭ್ಯ. ಆದರೆ ತಜ್ಞ ವೈದ್ಯರ ಸಲಹೆಯಿಲ್ಲದೆ ಬಳಸಿದರೆ, ಅಪಾಯಕಾರಿ ಅಡ್ಡ ಪರಿಣಾಮಗಳು ಆಗಬಹುದು. ದೀರ್ಘ‌ಕಾಲದ ನೋವು ನಿವಾರಣೆಗೆ ನೋವು ನಿವಾರಿಸುವ ಎಣ್ಣೆ, ಮುಲಾಮು ಬಳಕೆ ಉತ್ತಮ.

*ಕಾರ್ಟಿಲೇಜ್‌ ಪುನರುಜ್ಜೀವನ: ಸವೆದ ಕಾರ್ಟಿಲೇಜ್‌ ರಿಪೇರಿಗಾಗಿ ಬಹಳಷ್ಟು ಔಷಧಗಳು ಈಗ ಲಭ್ಯವಿವೆ (ಗ್ಲೂಕೋಸಮಿನ್‌, ಡಯಾಸೆರಿನ್‌... ಇತ್ಯಾದಿ).

*ದೇಹ ತೂಕ ಇಳಿಸುವ ಔಷಧ: ದೇಹತೂಕ ಇಳಿಸುವ ಪರ್ಯಾಯ ವಿಧಾನಗಳೆಲ್ಲ ವಿಫಲವಾದರೆ, ವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಅವಧಿಗೆ ತೂಕವಿಳಿಸುವ ಮಾತ್ರೆ/ಪುಡಿಗಳನ್ನು ಸೇವಿಸಬಹುದು.

*ಎಚ್ಚರ:  
ವೈದ್ಯರ ಸಲಹೆ ಇಲ್ಲದೆ, ಸ್ವಯಂ ಔಷಧ ಬಳಕೆ, ಯಾರದೋ ಕಮಿಷನ್‌ ಆಮಿಷಕ್ಕೆ ಮಾರಲ್ಪಡುವ ದುಬಾರಿ ನ್ಯೂಟ್ರಿಷನಲ್‌ ಸಪ್ಲಿಮೆಂಟ್ಸ್‌... ಇತ್ಯಾದಿಗಳು ಅವೈಜ್ಞಾನಿಕ ಹಾಗೂ ಅಪಾಯಕಾರಿ. ಅನಿಶ್ಚಿತ ಔಷಧಗಳಿಂದ ಹಣ ಹಾಗೂ ಆರೋಗ್ಯ ಕಳೆದುಕೊಳ್ಳಬೇಡಿ.
ಕೀಲು ನೋವಿಗೆ ಶಸ್ತ್ರಚಿಕಿತ್ಸೆ

ತಜ್ಞ ವೈದ್ಯರು ಕೀಲು ಸವೆತದ ತೀವ್ರತೆಯನ್ನನುಸರಿಸಿ, ಬೇರೆ ಬೇರೆ ಶಸ್ತ್ರಚಿಕಿತ್ಸಾ ವಿಧಾನಗಳ ಸಲಹೆ ನೀಡುತ್ತಾರೆ.

*ಇಂಜೆಕ್ಷನ್‌: ಸವೆದ ಕೀಲಿನ ಚಲನವಲನ ನಯವಾಗಿಸಲು, ಕೀಲೆಣ್ಣೆಯಂತಹ ಇಂಜೆಕ್ಷನ್‌ ಈಗ ಲಭ್ಯ. ಇಂಜೆಕ್ಷನ್‌ ಪಡೆದ ಕೂಡಲೇ ನಡೆದಾಡಲು ಸಾಧ್ಯ. ವೃದ್ಧಾಪ್ಯದ ಕೀಲುನೋವಿಗೆ ಸ್ಟಿರಾಯ್ಡ(steroidಇಂಜೆಕ್ಷನ್‌ ಬಳಸದಿರುವುದು ಉತ್ತಮ.

*ಅಥೋìಸ್ಕೋಪಿ/ಕೀಲುದರ್ಶಕ: (arthroscopy = keyhole surgery) ಸೂಕ್ಷ್ಮ ರಂಧ್ರದ ಸಹಾಯ ದಿಂದ ಕೀಲಿನ ಒಳಭಾಗವನ್ನು ನೋಡಿ, ಸ್ವತ್ಛ ಮಾಡುವ ವ್ಯವಸ್ಥೆ.

ಮೃದ್ವಸ್ಥಿ  (cartilage)ಯನ್ನು ನಯವಾಗಿಸಲು, ಕೀಲಿನೊಳಗೆ ತುಂಬಿದ ಕಸ (loose body) ತೆಗೆಯಲು ಬಳಸಬಹುದು.

ಸಂಧಿವಾತಕ್ಕೆ ಕಾರಣ ಪತ್ತೆ ಹಚ್ಚಲು ಬಯಾಪ್ಸಿ (biopsy) ಕೂಡ ಸಾಧ್ಯ.

*ಕಾಲಿನ ಓರೆಕೋರೆ ಸರಿಪಡಿಸುವ ಶಸ್ತ್ರಚಿಕಿತ್ಸೆ: ಕಾಲು ಬಾಗಿದ್ದರೆ, ಶಸ್ತ್ರಚಿಕಿತ್ಸೆ ನಡೆಸಿ, ನೇರವಾಗಿಸಿದರೆ, ಮುಂಬರುವ ಸವೆತ ತಡೆಗಟ್ಟಬಹುದು.

*ಮಂಡಿ/ಕೀಲು ಬದಲಾವಣೆ: ಇದು ಕೃತಕ ಕೀಲು ಅಳವಡಿಕೆ. ಕೀಲು ಸಂಪೂರ್ಣ ಸವೆದಿದ್ದು, ಕೀಲು ವಿಕಾರಗೊಂಡಿದ್ದಲ್ಲಿ, ಕೃತಕ ಮಂಡಿ ಅಳವಡಿಸಬೇಕಾಗುತ್ತದೆ. (ಕೃತಕ ಮಂಡಿ = total knee replacement. ಸಂಯುಕ್ತ ಲೋಹ ಹಾಗೂ ಪ್ಲಾಸ್ಟಿಕ್‌ ಬಳಸಿ ಇದನ್ನು ತಯಾರಿಸಲಾಗಿರುತ್ತದೆ.)
ನೋವು ನಿವಾರಣೆ, ಮೊದಲಿನಂತೆ ಚಲನವಲನ, ಕೃತಕ ಮಂಡಿ ಅಳವಡಿಸಿಕೊಂಡರೆ ಸಾಧ್ಯ. ಶಸ್ತ್ರಚಿಕಿತ್ಸೆ ನಡೆಸಿದ ಮರುದಿನವೇ ರೋಗಿ ನಡೆಯಲು ಸಾಧ್ಯ.

*ಹೊಸ ಆಯಾಮಗಳು: ಕಾರ್ಟಿಲೇಜ್‌ ಕಸಿ, ಸ್ಟೆಮ್‌ ಸೆಲ್‌ (stem cell therapy)ಚಿಕಿತ್ಸೆಗಳು ಸದ್ಯಕ್ಕೆ ದುಬಾರಿಯಾದರೂ, ಉತ್ತಮ ಭವಿಷ್ಯ ಹೊಂದಿವೆ. ಇನ್ನೆರಡು ವರ್ಷಗಳಲ್ಲಿ ಜನಪ್ರಿಯವಾಗಲಿವೆ.
ಸಂಧಿವಾತದೊಂದಿಗೆ ಜೀವನ: ಕೆಲವು ಸುಲಭ ಸೂತ್ರಗಳು

*ನಿಮಗಿರುವ ತೊಂದರೆ ಏನು ಎಂದು ಅರ್ಥಮಾಡಿಕೊಳ್ಳಿ. ವೃದ್ಧಾಪ್ಯದ ಸಂಧಿವಾತ ಕಾಯಿಲೆ ಅಲ್ಲ.

*ಆತ್ಮವಿಶ್ವಾಸದಿಂದ, ಚಟುವಟಿಕೆಯಿಂದಿರಿ. ನಿಯಮಿತ ದೈಹಿಕ ವ್ಯಾಯಾಮ ಉತ್ಸಾಹ ನೀಡುತ್ತದೆ.

*ಚೆನ್ನಾಗಿ ನಿದ್ರಿಸಿ. ರಾತ್ರಿ ನಿಯಮಿತವಾಗಿ ನಿದ್ರಿಸಿ; ರೋಗದ ಪ್ರಭಾವ, ನೋವು ಎರಡೂ ಕಡಿಮೆಯಾಗುತ್ತದೆ.

*ಕೊರಗದೆ, ಸಂತೋಷವಾಗಿರಿ, ಹವ್ಯಾಸ, ಚಟುವಟಿಕೆಗಳು ನಿಮ್ಮನ್ನು ನೋವಿನಿಂದ ದೂರವಿಡುತ್ತವೆ.

*ಚಟುವಟಿಕೆ ಹಾಗೂ ವಿರಾಮ ಸಮತೋಲನದಲ್ಲಿರಲಿ.

*ಕುಟುಂಬ, ಗೆಳೆಯರು ಹಾಗೂ ತಜ್ಞವೈದ್ಯರ ಸಲಹೆ, ಪ್ರೋತ್ಸಾಹ ಎಂದಿಗೂ ನಿಮ್ಮೊಂದಿಗಿರಲಿ.
ಕೊನೆ ಹನಿ:  
ಸಂಧಿವಾತ ದೀರ್ಘ‌ಕಾಲದ ತೊಂದರೆ. ನಿಮ್ಮ ಕುಟುಂಬ ವೈದ್ಯರು ಹಾಗೂ ತಜ್ಞವೈದ್ಯರ ಮೇಲೆ ವಿಶ್ವಾಸವಿರಿಸಿ. ಕಾಲಕಾಲಕ್ಕೆ ಅವರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಸರಿಯಾದ ಸಮಯಕ್ಕೆ ಚಿಕಿತ್ಸೆ ನಡೆಸಿದರೆ ಮಾತ್ರ ಚಿಕಿತ್ಸೆ ಯಶಸ್ವಿಯಾಗಬಲ್ಲದು. ಸ್ವಯಂ ಚಿಕಿತ್ಸೆ, ಅನಿಶ್ಚಿತ ಔÐಧಗಳು, ಜಾಹೀರಾತಿನ ಭರಾಟೆ ಇತ್ಯಾದಿಗೆ ಮಾರುಹೋಗಿ, ಹಣ ಹಾಗೂ ಆರೋಗ್ಯ ಕಳೆದುಕೊಳ್ಳಬೇಡಿ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಶರತ್‌ ಕುಮಾರ್‌ ರಾವ್‌, ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಮೂಳೆರೋಗಗಳ ಚಿಕಿತ್ಸಾ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಹೃದ್ರೋಗ: ಕೆಲವು ಮಾಹಿತಿಗಳು


ಡಾ| ನರಸಿಂಹ ಪೈ, ಇಂಟರ್‌ವೆನ್ಶನಲ್‌ ಕಾರ್ಡಿಯಾಲಜಿಸ್ಟ್‌, ಕೆ.ಎಂ.ಸಿ. ಆಸ್ಪತ್ರೆ, ಡಾ| ಬಿ.ಆರ್‌. ಅಂಬೇಡ್ಕರ್‌ ಸರ್ಕಲ್‌, ಮಂಗಳೂರು-1.
ಹೃದ್ರೋಗ  ಈಗೀಗ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ.ದೇಶದಲ್ಲಿ ನಡೆದ ಅನೇಕ ಅಧ್ಯಯನಗಳ ಪ್ರಕಾರ, ನಮ್ಮ  ಮಹಾನಗರಗಳಲ್ಲಿ (ಬೆಂಗಳೂರು, ದೆಹಲಿ, ಜೈಪುರ , ಮುಂಬೈ , ಚೆನ್ನೈ ಅಥವಾ ತಿರುವನಂತಪುರ ) 35 ವರ್ಷ ವಯಸ್ಸು ಮೀರಿದ ಜನಸಮೂಹದಲ್ಲಿ ಸುಮಾರು 10 ಪ್ರತಿಶತದಷ್ಟು ಜನರಿಗೆ ಹೃದಯ ರೋಗವಿದೆ.

ಗ್ರಾಮೀಣ ಭಾರತದಲ್ಲಿ ಈ ಸಂಖ್ಯೆ ಸ್ವಲ್ಪ  ಕಡಿಮೆಯಿದ್ದರೂ, ಅಲ್ಲಿಯೂ ಅದು ಏರುತ್ತಿರುವ ಪ್ರವೃತ್ತಿಯನ್ನೇ ತೋರುತ್ತಿದೆ (ಸುಮಾರು 4 ಪ್ರತಿಶತ ).

ದೀರ್ಘ‌ಕಾಲಿಕ ರೋಗಗಳ ನಿಯಂತ್ರಣ ಕೇಂದ್ರವು 2004ರಲ್ಲಿ ಪ್ರಕಟಿಸಿದ  ದತ್ತಾಂಶಗಳಲ್ಲಿನ ಅಂಕಿ-ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಈ ಅಂಕಿಗಳು, ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಸಮನಾಗಿವೆ.
ಅಪಾಯ ಪೂರಕ ಅಂಶಗಳು
ಅಪಾಯ ಪೂರಕ ಅಂಶಗಳನ್ನು  2 ವರ್ಗಗಳಾಗಿ ವಿಂಗಡಿಸಲಾಗಿದೆ.

ಪ್ರತಿಕೂಲ ಅಪಾಯ ಪೂರಕ ಅಂಶಗಳು
*ಧೂಮಪಾನ ಮಾಡುವವರು.

*ಹೆಚ್ಚಿದ ರಕ್ತದ ಒತ್ತಡ.

*ಹೆಚ್ಚಿದ ಮಟ್ಟಗಳಲ್ಲಿರುವ ಕೊಲೆಸ್ಟರಾಲ್‌ (ಏರಿದ  ಎಪಿಒಬಿ/ಎಪಿಒಎ1ಅನುಪಾತ ).

*ಮಧುಮೇಹ.

*ಸೊಂಟದ ಭಾಗದ ಬೊಜ್ಜು.

*ಮನೋ ಸಾಮಾಜಿಕ ಒತ್ತಡಗಳು.
ರಕ್ಷಣಾತ್ಮಕ ಅಂಶಗಳು
*ಪ್ರತಿದಿನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು.

*ನಿಯಮಿತ ವ್ಯಾಯಾಮ.

*ಒಂದು ವೇಳೆ ಮದ್ಯ ಸೇವಿಸುವವರಾಗಿದ್ದರೆ, ಅದನ್ನು ಕಡಿಮೆಮಾಡುವುದು.

ಜಾಗತಿಕವಾಗಿ ನೋಡಿದರೆ, ಮದ್ಯಸೇವನೆಗೆ ಹೊರತಾಗಿ, ಈ ಎಲ್ಲ  9 ಅಪಾಯ ಪರ/ವಿರುದ್ಧ ಅಂಶಗಳಿಗೂ, ಹೃದಯಾಘಾತಗಳಿಗೂ ಬಹಳ ಗಣನೀಯವಾದ  ಸಂಬಂಧವಿದೆ. ಮದ್ಯ ಸೇವನೆಯ ಅಂಕಿಅಂಶಗಳು ಅಷ್ಟೇನೂ  ಗಣನೀಯವಾಗಿಲ್ಲ. ಈ ಅಪಾಯಗಳು ಜಗತ್ತಿನಾದ್ಯಂತ  ಯಾವುದೇ ಧರ್ಮ,
ಜನಾಂಗ ಮತ್ತು ಲಿಂಗದವರಲ್ಲಿ ಏಕ ಪ್ರಕಾರವಾಗಿದ್ದವು.

ಜಾಗತಿಕವಾಗಿ ಅತ್ಯಂತ ಬಲವಾದ ಅಪಾಯ ಸೂಚಕವೆಂದರೆ. ಎಪಿಒಬಿ/ಎಪಿಒಎ1 ಅನುಪಾತ. (ಕೊಲೆಸ್ಟರಾಲ್‌ ಅಪಾಯದ ಹೆಚ್ಚು  ವಿಶ್ವಾಸನೀಯ ಸೂಚಕ). ನಂತರದ ಸ್ಥಾನ ಧೂಮಪಾನದ್ದು . ಇವುಗಳಿಂದ ಹೃದಯಾಘಾತದ ಸಾಧ್ಯತೆ ಅನುಕ್ರಮವಾಗಿ  4 ಪಟ್ಟು ಮತ್ತು 3 ಪಟ್ಟು ಹೆಚ್ಚುತ್ತದೆ.

ಮೇದಸ್ಸು ಮತ್ತು ಧೂಮಪಾನಕ್ಕಿರುವ  ಅಪಾಯಕಾರಿ ಸಂಬಂಧ ಕೂಡ ಈಗಾಗಲೇ ಸಾಬೀತಾಗಿದೆ.
ವಯಸ್ಕರಿಗಿಂತ ಯುವಜನರಲ್ಲಿ  ಅಂದರೆ, ಪುರುಷರಾದರೆ 55, ಮಹಿಳೆಯರಾದರೆ 65 ವರ್ಷಗಳಿಗಿಂತ ಕಡಿಮೆಯವರಲ್ಲಿ ಇದು ಹೆಚ್ಚು ಚೆನ್ನಾಗಿ ಗೋಚರವಾಗುತ್ತದೆ.

ಅಪಾಯ ಪ್ರತಿಬಂಧ ಹೇಗೆ?
ಹೃದಯಾಘಾತಗಳ ಮತ್ತು ಸಂಬಂಧಿತ ಸವಾಲುಗಳ ಅಪಾಯಗಳನ್ನು  ಕಡಿಮೆ ಮಾಡಲು ನೆನಪಿಡಬೇಕಾದ ಅಂಶಗಳು

ಹೀಗಿವೆ -  

ಧೂಮಪಾನ  ಇನ್ನೂ ಮಾಡುತ್ತಿರುವಿರಾ?
ಒಂದು ಸಿಗರೇಟನ್ನು ಸೇದಿದರೆ, ನಿಮ್ಮ ಆಯಸ್ಸು 11 ನಿಮಿಷಗಳಷ್ಟು  ಮೊಟಕಾಗುತ್ತದೆ. ಪರೋಕ್ಷವಾಗಿ ಧೂಮಪಾನ ಮಾಡುವವರು ಕೂಡ ಹೃದಯಾಘಾತಗಳಿಗೆ ಈಡಾಗುವ ಅಪಾಯ ಸಾಧ್ಯತೆ 90 ಪ್ರತಿಶತದಷ್ಟು  ಹೆಚ್ಚು.

ಯಾವುದೇ ವಯಸ್ಸಿನಲ್ಲಿ  ಧೂಮಪಾನ ತ್ಯಜಿಸಿದರೂ, 3 ವರ್ಷಗಳಷ್ಟು  ಅಪಾಯ  ಕಡಿಮೆಯಾಗುತ್ತದೆ.  ಈ ದುರಭ್ಯಾಸವನ್ನು  ಬಿಡಲು ಎಂದಿಗೂ ಕಾಲ ಮೀರಿಲ್ಲ . ಧೂಮಪಾನದಲ್ಲಿ ಕಡಿತದಿಂದ  ಖಂಡಿತ ಒಳ್ಳೆಯದಾಗುತ್ತದೆ. ಸಂಪೂರ್ಣವಾಗಿ ಬಿಟ್ಟುಬಿಟ್ಟರೆ ಬಹಳ ಒಳ್ಳೆಯದು.
ರಕ್ತದ ಒತ್ತಡ
ರಕ್ತದೊತ್ತಡ ಸ್ವಲ್ಪ ಹೆಚ್ಚಾದರೂ, ಅದು ಪಾರ್ಶ್ವವಾತ ಮತ್ತು ಹೃದಯಾಘಾತಗಳ ಸಾಧ್ಯತೆಗಳನ್ನು ಏರಿಸಿಬಿಡುತ್ತದೆ. ಇದನ್ನು  ಸೋಂಕುಶಾಸ್ತ್ರ ಅಧ್ಯಯನಗಳು ಮತ್ತು ಜೀವ  ವಿಮಾ ಅಂಕಿ-ಅಂಶಗಳು ರುಜುವಾತು  ಮಾಡಿವೆ.
ರಕ್ತದ ಒತ್ತಡದ ಬಗ್ಗೆ ಕೆಲ ಮಿಥ್ಯೆಗಳು
ರಕ್ತದ ಒತ್ತಡ  ವಯಸ್ಸಿನೊಂದಿಗೆ ಹೆಚ್ಚುತ್ತದೆ ಮತ್ತು ಇದೊಂದು ಸಾಧಾರಣ ಸಂಗತಿ.

60 ವರ್ಷ ಪ್ರಾಯದ ವ್ಯಕ್ತಿಯ ಸಹಜ ಬಿಪಿ 160, 80 ವರ್ಷದವರಲ್ಲಿ 180 ಎಂಬುದು ಸತ್ಯವಲ್ಲ. ಯಾವುದೇ ವಯಸ್ಸಿನವರಿಗೂ ಸಹಜ ಬಿಪಿ 120ಕ್ಕಿಂತ ಕಡಿಮೆಯೇ ಇರಬೇಕು.

ಯಾವುದೇ ರೋಗಗಳಿಲ್ಲದ, ಬಿಪಿ ಕಡಿಮೆಯಿರುವ ವ್ಯಕ್ತಿಗಳು  ಬಹುಶಃ ದೀರ್ಘ‌ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸಾಧ್ಯತೆಗಳಿರುವ ಅದೃಷ್ಟಶಾಲಿಗಳು. ಅಂತಹವರು ಸುಮ್ಮನೆ ಟಾನಿಕ್‌ ಅಥವಾ ಬಿಪಿ ಹೆಚ್ಚಿಸುವ ಪ್ರಯತ್ನಗಳ ಮೇಲೆ ಹಣ ಪೋಲು ಮಾಡಬಾರದು.
ಬಿಪಿ-ತಗ್ಗಿಸುವ ಔಷಧಿಗಳನ್ನು ತೆಗೆದುಕೊಳ್ಳಲು ಸೂಚ‌ನೆಗಳು
ಯಾವುದೇ ವಯೋಮಾನದವರಿಗೆ ಪ್ರಶಸ್ತವಾದ ಬಿಪಿ  ಎಂದರೆ 120/80ಕ್ಕಿಂತ ಕಡಿಮೆಯಿರುವುದು. ಸಾಮಾನ್ಯವಾಗಿ ಬಿಪಿ 140/85ಕ್ಕಿಂತ ಹೆಚ್ಚಿದ್ದರೆ ಔಷಧಿಗಳನ್ನು ಸೂಚಿಸಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ 130/80 ಇದ್ದರೂ ಔಷಧಿಗಳನ್ನು ಸೂಚಿಸಲಾಗುತ್ತದೆ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ.

*ಮಧುಮೇಹವಿರುವ ರೋಗಿಗಳು.

*ಮೂತ್ರಪಿಂಡ ಕಾಯಿಲೆ ಮತ್ತು ಮೂತ್ರದಲ್ಲಿ  ಯೂರಿಯಾ ಮತ್ತು ಕ್ರಿಯಾಟಿನೀನ್‌ ಅಂಶ ಹೆಚ್ಚಿರುವ ರೋಗಿಗಳು.

*ಈಗಾಗಲೇ ಹೃದಯ ರೋಗ ಅಥವಾ ಪಾರ್ಶ್ವವಾತ ಪೀಡಿತ ರೋಗಿಗಳು.
ರಕ್ತದೊತ್ತಡ ನಿಯಂತ್ರಣ
ರಕ್ತದೊತ್ತಡವನ್ನು ನಿಯಂತ್ರಿಸಲು, ನಿಯಮಿತ ವ್ಯಾಯಾಮ, ದಿನಕ್ಕೆ 4-5 ಗ್ರಾಂಗಳಿಗಿಂತ ಹೆಚ್ಚು ಉಪ್ಪು
ಸೇವಿಸದಿರುವುದು, ತಾಜಾ ಹಣ್ಣುಗಳು  ಮತ್ತು  ಎಲೆಗಳುಳ್ಳ ತರಕಾರಿಗಳು, ಮದ್ಯಪಾನ  ಮಾಡದಿರುವುದು ಅಥವಾ ಮದ್ಯಪಾನ ಮಿತವಾಗಿರುವುದು, ತೂಕ  ಕಡಿಮೆಮಾಡಿಕೊಳ್ಳುವುದು ಅಗತ್ಯ.

ಕೊಲೆಸ್ಟರಾಲ್‌ ಮಟ್ಟ ಹೆಚ್ಚಿರುವುದೂ  ಹೃದ್ರೋಗಕ್ಕೆ ಪ್ರಮುಖ ಕಾರಣ. ಮಧುಮೇಹ ರೋಗದಿಂದ ಬಳಲುತ್ತಿರುವವರೂ ಸಹ ಈ ಬಗ್ಗೆ ಹೆಚ್ಚು ಗಮನ ವಹಿಸಲೇಬೇಕು.
ಮನೋ ಸಾಮಾಜಿಕ ಒತ್ತಡ
ಮಾನಸಿಕ ಒತ್ತಡವು ಒಂದು ಮುಖ್ಯವಾದ ಅಪಾಯ ಪೂರಕ ಅಂಶ. ಇದರಿಂದ ಆಡ್ರಿನಲಿನ್‌ ಉತ್ಪತ್ತಿ ಹೆಚ್ಚಾಗುತ್ತದೆ; ದೀರ್ಘ‌ಕಾಲದ ಮಾನಸಿಕ ಒತ್ತಡವು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ, ಮಧುಮೇಹವನ್ನು ಆಹ್ವಾನಿಸುತ್ತದೆ  ಮತ್ತು ಹೃದಯದ ಅಪಧಮನಿಗಳನ್ನು  ಸಂಕುಚನಗೊಳಿಸುತ್ತದೆ.

ಉಸಿರಾಟದ ವ್ಯಾಯಾಮಗಳು, ದೇಹ ಸಡಿಲಿಸಿಕೊಳ್ಳುವ  ವ್ಯಾಯಾಮಗಳು, ಯೋಗ, ಧ್ಯಾನ ಮುಂತಾದವುಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾರ್ಗೋಪಾಯಗಳಿಂದ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಆಡ್ರಿನಲಿನ್‌ ಉತ್ಪಾದನೆಯಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ, ಈ ವಿಶ್ರಾಂತಿ ಕೊಡುವ ತಂತ್ರಗಳು  ಬಹಳ ಸುರಕ್ಷಿತ. ಹೆಚ್ಚಿನ ಅಪಾಯದ  ಭೀತಿಯುಳ್ಳ  ಜನರಿಗೆ ಇವು ಅತ್ಯುತ್ತಮ .

ನಿರಂತರ  ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ವ್ಯಾಯಾಮ ಒಂದು ಆತ್ಯಂತ ಉಪಯೋಗಿ ವಿಧಾನ . ಇದು ನೆರವಾಗುತ್ತದೆ, ಹೃದಯಾಘಾತದ ಸಂಭವವನ್ನು ಕಡಿಮೆ ಮಾಡುತ್ತದೆ  ಮತ್ತು ಬೊಜ್ಜನ್ನು ನಿಯಂತ್ರಿಸುತ್ತದೆ.

ಇದರ ಜೊತೆಗೆ, ಹೃದಯ -ಆರೋಗ್ಯ ಸ್ನೇಹಿ ಆಹಾರ  ಕ್ರಮವನ್ನು, ಅಂದರೆ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು, ಕಡಿಮೆ ಉಪ್ಪಿರುವ ಪದಾರ್ಥಗಳು ಇವನ್ನೆಲ್ಲ ನಮ್ಮ ಆಹಾರ ಪದ್ಧತಿಯಲ್ಲಿ ಅನುಸರಿಸಿದರೆ,  ಸಹಾಯವಾಗುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಪದ್ಮಕುಮಾರ್‌,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಕಾರ್ಡಿಯಾಲಾಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಸ್ತನದ ಕ್ಯಾನ್ಸರ್‌

ಡಾ| ಅಂಕುರ್‌ ಶರ್ಮ, ಅಸಿಸ್ಟೆಂಟ್‌ ಪ್ರೊಫೆಸರ್‌, ಸರ್ಜರಿ ವಿಭಾಗ, ಕೆ.ಎಂ.ಸಿ., ಮಣಿಪಾಲ 
ಇಂದು ಮಹಿಳೆಯರನ್ನು ಬಹಳವಾಗಿ ಬಾಧಿಸುತ್ತಿರುವ, ಹಾಗೂ ಅವರ ಸಾವಿಗೆ ಕಾರಣವಾಗುತ್ತಿರುವ ಕ್ಯಾನ್ಸರ್‌ಗಳಲ್ಲಿ ಸ್ತನದ ಕ್ಯಾನ್ಸರ್‌ ಸಹ ಒಂದು.

ಸ್ತನದ ಕ್ಯಾನ್ಸರ್‌ ಎಂದರೆ, ಅದು ಸಿರಿವಂತರಿಗೆ ಬರುವ ಕ್ಯಾನ್ಸರ್‌ ಹಾಗೂ ಗರ್ಭಕೋಶದ ಕತ್ತಿನ ಕ್ಯಾನ್ಸರ್‌ ಬಡವರನ್ನು ಬಾಧಿಸುವ ಕ್ಯಾನ್ಸರ್‌ ಎಂಬ ಕಲ್ಪನೆ ಇದ್ದ ಕಾಲವೊಂದಿತ್ತು.


ಆದರೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಗಳಲ್ಲಿ ಬೆಳೆಯುತ್ತಿರುವ ಪಾಶ್ಚಾ éತ್ಯೀಕರಣ ಹಾಗೂ ಕ್ಷಿಪ್ರವಾಗಿ ಬದಲಾಗುತ್ತಿರುವ ಜೀವನ ಶೈಲಿಗಳಿಂದಾಗಿ, ಈ ಕಾಯಿಲೆಗಳು ಹಿಂದೆಂದಿಗಿಂತಲೂ ಈಗ ಬಹಳ ಸಾಮಾನ್ಯವಾಗುತ್ತಿವೆ.

ಭಾರತದಲ್ಲಿಯೂ ಸಹ, ದೊಡ್ಡ ಪಟ್ಟಣಗಳಲ್ಲಿ, ಸ್ತನದ ಕ್ಯಾನ್ಸರ್‌ ಎಂಬದು, ಗರ್ಭಕೋಶದ ಕತ್ತಿನ ಕ್ಯಾನ್ಸರಿಗಿಂತಲೂ, ಸರ್ವೇಸಾಮಾನ್ಯವೆನಿಸಿದೆ. ಸ್ತನದ ಕ್ಯಾನ್ಸರಿನ ಪ್ರಕರಣಗಳು ಸಣ್ಣ ಸಣ್ಣ ನಗರ-ಪಟ್ಟಣಗಳಲ್ಲಿಯೂ ಹೆಚ್ಚುತ್ತಿವೆ.

ಕೆಲವು ಜನರಲ್ಲಿ ಕ್ಯಾನ್ಸರ್‌ ಬೆಳವಣಿಗೆ ಉಂಟಾಗಬಹುದಾದ ಅಪಾಯ ಪೂರಕ ಅಂಶಗಳು ಇರುತ್ತವೆ. 

ಅವುಗಳೆಂದರೆ, 

* ಸ್ತನ, ಅಂಡಾಶಯ ದೊಡ್ಡ ಕರುಳು ಕ್ಯಾನ್ಸರಿನ ಕೌಟುಂಬಿಕ ಹಿನ್ನೆಲೆ ಇರುವವರು. ವಂಶ ಪಾರಂಪರ್ಯವಾಗಿ ಕ್ಯಾನ್ಸರಿನ ಹಿನ್ನೆಲೆ ಇರುವವರಲ್ಲಿ 40 ವರ್ಷಕ್ಕೆ ಮೊದಲೇ ಕ್ಯಾನ್ಸರ್‌ ಕಂಡು ಬರಬಹುದು. ಹಾಗಾಗಿ, ಎಲ್ಲಾ ವಯೋಮಾನದ ಮಹಿಳೆಯರೂ ಸಹ ಈ ಕಾಯಿಲೆಯ ಬಗ್ಗೆ ಜಾಗೃತರಾಗಿರಬೇಕಾದುದು ಬಹಳ ಆವಶ್ಯಕ.

ಸ್ತನಗಳಲ್ಲಿ ಗಂಟುಗಳಿದ್ದರೆ, ಅದರ ಅರ್ಥ ನಿಮಗೆ ಕ್ಯಾನ್ಸರ್‌ ಇದೆ ಎಂದಲ್ಲ. ಬಹುತೇಕ ಗಂಟುಗಳು ಕ್ಯಾನ್ಸರ್‌ಕಾರಕಗಳಲ್ಲದವುಗಳೇ ಆಗಿರುತ್ತವೆ. ಆದರೆ ಸ್ತನಗಳಲ್ಲಿ ಗಂಟು ಇದೆ ಎಂದಾದರೆ, ನೀವು ಒಬ್ಬ ತಜ್ಞ ವೈದ್ಯರಿಗೆ ಅದನ್ನು ತೋರಿಸಿ, ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಆವಶ್ಯಕ.

ಸ್ತನಗಳ‌ ಕ್ಯಾನ್ಸರಿನಲ್ಲಿ ಕಂಡು ಬರುವ ಬಹಳ ಪ್ರಮುಖ ಹಾಗೂ ಸಾಮಾನ್ಯವಾದ ಲಕ್ಷಣ ಅಂದರೆ ಸ್ತನಗಳಲ್ಲಿ ಕಂಡುಬರುವ ಗಂಟುಗಳು. ಇತರ ಲಕ್ಷಣಗಳೆಂದರೆ, ಕಂಕುಳಲ್ಲಿ ಬಾವು ಹಾಗೂ ಸ್ತನದ ತೊಟ್ಟಿನಿಂದ ರಕ್ತ ಸ್ರಾವವಾಗುವುದು... ಇತ್ಯಾದಿ.

ಗಮನಿಸಬೇಕಾದ ಮತ್ತೂಂದು ಪ್ರಮುಖ ಅಂಶ ಎಂದರೆ, ಗರ್ಭಧಾರಣೆ ಹಾಗೂ ಹಾಲೂಡಿಸುವಿಕೆಯ ಹಂತಗಳು ಸಹ ಸ್ತನದ ಕ್ಯಾನ್ಸರಿನ ಬೆಳವಣಿಗೆಯಲ್ಲಿ ಸುರಕ್ಷಿತ ಅವಧಿಗಳಲ್ಲ ಎಂಬುದು.

ಸ್ತನದ ಕ್ಯಾನ್ಸರಿಗೆ ಆರಂಭದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ರೇಡಿಯೊತೆರಪಿ ಮೂಲಕ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಆದರೆ ಇದರ ಜೊತೆಗೆ ಕೀಮೊತೆರಪಿಯನ್ನೂ ಕೊಡುವ ಮೂಲಕ, ಉತ್ತಮ ಫಲಿತಾಂಶ ಹಾಗೂ ಉತ್ತಮ ಜೀವನವನ್ನು ನಿರೀಕ್ಷಿಸಬಹುದು.

ಇವೆಲ್ಲಕ್ಕಿಂತಲೂ ಬಹಳ ಪ್ರಮುಖ ಅಂಶ ಎಂದರೆ, ಆರಂಭಿಕ ಹಂತದಲ್ಲೇ ಈ ಕ್ಯಾನ್ಸರಿನ ಪತ್ತೆ ಸಾಧ್ಯವಾದರೆ, ಚಿಕಿತ್ಸೆಗಳಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಕ್ಯಾನ್ಸರ್‌ ಕಣಗಳು ಹತ್ತಿರದ ಇತರ ಅಂಗಾಂಶಗಳಿಗೂ ಹರಡಿದರೆ, ಆಗ ಕಾಯಿಲೆಯನ್ನು ಹತೋಟಿಗೆ ತರುವುದು ಸವಾಲಾಗುತ್ತದೆ.

ರೋಗಿಗಳು ಈ ಕಾಯಿಲೆಯ ಇರುವಿಕೆಯನ್ನು ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆಯನ್ನು ಸಂಪೂರ್ಣವಾಗಿ ಅನುಸರಿಸಿದರೆ, ತಮ್ಮ ಜೀವಿತದ ಇನ್ನಷ್ಟು ಅರ್ಥಪೂರ್ಣ ದಿನಗಳನ್ನು ಅಥವಾ ದಶಕಗಳನ್ನು ಕಾಣಬಹುದು.

ಸ್ತನದ ಕ್ಯಾನ್ಸರ್‌ ಇದೆ ಎಂದ ಮಾತ್ರಕ್ಕೆ ಅದರ ಅರ್ಥ, ಸ್ತನಗಳನ್ನು ತೆಗೆದುಹಾಕಲೇ ಬೇಕು ಎಂದು ತಿಳಿದುಕೊಳ್ಳಬೇಕಾಗಿಲ್ಲ. ಆರಂಭದಲ್ಲೇ ಕ್ಯಾನ್ಸರ್‌ ಇರುವಿಕೆ ಪತ್ತೆಯಾದ ಜನರಿಗೆ, ಸಣ್ಣ ಚಿಕಿತ್ಸಾ ವಿಧಾನದ ಮೂಲಕ ಸ್ತನದಲ್ಲಿ ಕ್ಯಾನ್ಸರ್‌ ಹರಡಿಕೊಂಡಿರುವ ಭಾಗವನ್ನು ಮಾತ್ರವೇ ತೆಗೆದುಹಾಕಿ, ಉಳಿದ ಭಾಗಗಳನ್ನು ಉಳಿಸಿಕೊಳ್ಳುವ ಅವಕಾಶಗಳಿವೆ.

ಆದರೆ ಇದು ಎಲ್ಲಾ ರೋಗಿಗಳ ಸಂದರ್ಭದಲ್ಲಿಯೂ ಸಾಧ್ಯ ಇಲ್ಲ ಎಂಬುದನ್ನು ಗಮನಿಸಬೇಕು. ಅದೇ ರೀತಿ, ಸ್ತನದ ಕ್ಯಾನ್ಸರ್‌ ಇರುವ ಎಲ್ಲಾ ರೋಗಿಗಳೂ ಕೀಮೊತೆೆರಪಿಯನ್ನು ಪಡೆಯಲೇಬೇಕು ಎಂದು ತಿಳಿದುಕೊಳ್ಳಬೇಕಾಗಿಲ್ಲ.

ಸ್ತನದ ಕ್ಯಾನ್ಸರಿಗೆ ಕೊಡುವ ಚಿಕಿತ್ಸೆಯು, ಆ ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ಅವಲಂಬಿಸಿದೆ. ಆರಂಭದಲ್ಲೇ ಕಾಯಿಲೆಯ ಪತ್ತೆ ಸಾಧ್ಯವಾದರೆ, ಪರಿಣಾಮ ಉತ್ತಮ.

ಸ್ತನದ ಕ್ಯಾನ್ಸರಿನ ಚಿಕಿತ್ಸೆಯಲ್ಲಿ  ಶಸ್ತ್ರಚಿಕಿತ್ಸೆಯದು ಬಹಳ ಪ್ರಮುಖ ಹಾಗೂ ಅತ್ಯವಶ್ಯಕ ಪಾತ್ರವಾಗಿದೆ.

ಈ ವಿಧಿಯಲ್ಲಿ, ಕೇವಲ ಕ್ಯಾನ್ಸರ್‌ ಇರುವ ಭಾಗವನ್ನು ಮಾತ್ರವೇ ತೆಗೆದು ಹಾಕಲಾಗುತ್ತದೆ
ಹಾಗೂ ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ಹಾಗೂ ರೋಗಿಗೆ ಯಾವ ಹೆಚ್ಚುವರಿ ಚಿಕಿತ್ಸೆಗಳ ಆವಶ್ಯಕತೆ ಇದೆ, ಅಂದರೆ ಕೀಮೊತೆರಪಿ ಅಥವಾ ರೇಡಿಯೊತೆರಪಿ... ಇತ್ಯಾದಿಗಳ ಅಗತ್ಯ ಇದೆಯೇ ಎಂಬುದನ್ನು ಇದು ತಿಳಿಸುತ್ತದೆ.

ಕೀಮೊತೆರಪಿ ಔಷಧಿಗಳ ಮೂಲಕ ಕ್ಯಾನ್ಸರನ್ನು ವಿಳಂಬಗೊಳಿಸುವ ಹಾಗೂ ಮರುಕಳಿಕೆಯನ್ನು ತಪ್ಪಿಸುವ ಸಾಧ್ಯತೆಗಳೂ ಇವೆ.

ಓದುಗರು ನೆನಪಿಡಬೇಕಾದುದೇನೆಂದರೆ, ಆರಂಭದಲ್ಲೇ ಸ್ತನದ ಕ್ಯಾನ್ಸರಿನ ಪತ್ತೆ ಸಾಧ್ಯವಾದರೆ, ಚಿಕಿತ್ಸೆ ಆರಂಭಕ್ಕೆ ಸುಲಭವಾಗುತ್ತದೆ. ಕ್ಯಾನ್ಸರಿನ ಲಕ್ಷಣಗಳನ್ನು ನಿರ್ಲಕ್ಷಿಸುವುದು, ಅಥವಾ ಗಂಟು/ಗಡ್ಡೆ ತನ್ನಷ್ಟಕ್ಕೆ ತಾನೇ ಮರೆಯಾಗಲಿ ಎಂದು ಕಾಯುವುದರಿಂದ ಚಿಕಿತ್ಸೆ ವಿಳಂಬವಾಗಬಹುದು ಹಾಗೂ ಇದರಿಂದ ಕ್ಯಾನ್ಸರ್‌ನ ಗಾತ್ರವು ಬೆಳೆದು, ಅದು ಇತರ ಭಾಗಗಳಿಗೂ ಹರಡಬಹುದು.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಸಂಪತ್‌ಕುಮಾರ್‌, ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಸರ್ಜರಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಲಕ್ವಾ / ಮೆದುಳಿನ ಆಘಾತ - ಇನ್ನಷ್ಟು ತಿಳಿಯಿರಿ

ಡಾ| ರಕ್ಷಿತ್‌ ಕೆ.ಸಿ, ನ್ಯುರಾಲಜಿ ತಜ್ಞರು, ಕೆ.ಎಂ.ಸಿ., ಅಂಬೇಡ್ಕರ್‌ ವೃತ್ತ, ಮಂಗಳೂರು. 
ಲಕ್ವಾ  ಎಂದರೇನು ?
ಹೃದಯಾಘಾತ ಆದಾಗ ಹೃದಯಕ್ಕೆ ಆಗುವ ಜಖಂನ ರೀತಿಯಲ್ಲೇ, ಮೆದುಳಿಗೆ ಆಘಾತ ಆದಾಗ ಕಾಣಿಸಿಕೊಳ್ಳುವ ಮೆದುಳಿನ ಜಖಂನ್ನು ಲಕ್ವಾ ಎಂದು ಕರೆಯಲಾಗುತ್ತದೆ.

ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ  ಆಗುವ ತೊಂದರೆಯೇ (ಸೆರಬೊÅವ್ಯಾಸ್ಕಾಲರ್‌ ರೋಗ ) ಲಕ್ವಾಕ್ಕೆ ಕಾರಣ.
ಲಕ್ವಾದ ವಿಧಗಳು ಯಾವುವು ?


ಐಷೆಮಿಕ್‌ ಲಕ್ವಾ : 

ಇದು ಅತ್ಯಂತ ಸಾಮಾನ್ಯವಾದ ವಿಧ. ಮೆದುಳಿನ ಯಾವುದೋ ಒಂದು ಭಾಗಕ್ಕೆ ರಕ್ತ ಸರಬರಾಜು ಹಠಾತ್‌ ನಿಂತಾಗ ಕಂಡುಬರುವ ಸ್ಥಿತಿ ಇದು.

ಹೆಚ್ಚಾಗಿ ಒಂದು ರಕ್ತನಾಳದಲ್ಲಿ  ರಕ್ತ ಹೆಪ್ಪುಗಟ್ಟಿ  ಅಡ್ಡಿ ಉಂಟಾದಾಗ, ಈ ಸ್ಥಿತಿ ಕಂಡುಬರುತ್ತದೆ. ಅಂತಹವರಲ್ಲಿ  ಅದಕ್ಕೆ ಮೊದಲೇ ರಕ್ತನಾಳದಲ್ಲಿ  ಕೊಬ್ಬಿನ ಅಂಶ ಶೇಖರಣೆಗೊಂಡು, ಅಡ್ಡಿಗಳು ಆರಂಭಿಕ ಹಂತದಲ್ಲಿರುತ್ತವೆ ( ಅಥೆರೊ ಸ್ಕಿ$Éರೋಸಿಸ್‌ ).
ಹೆಮೊರೇಜಿಕ್‌ ಲಕ್ವಾ : 
ಒಡೆದ ಅಥವಾ ಸ್ರಾವ ಆಗುತ್ತಿರುವ ರಕ್ತನಾಳವೊಂದರ ಕಾರಣದಿಂದಾಗಿ ಮೆದುಳಿನಲ್ಲಿ  ರಕ್ತಸ್ರಾವ ಸಂಭವಿಸುತ್ತಿರುವ ಸ್ಥಿತಿ ಇದು. ಇದಕ್ಕೆ ರಕ್ತನಾಳದಲ್ಲಿ  ದುರ್ಬಲ ಭಾಗವೊಂದು ಬಲೂನಿನಂತೆ ಹಿಗ್ಗಿ , ಒಡೆದುಹೋಗುವುದು (ಅನ್ಯೂರಿಸಂ) ಕಾರಣವಾಗಿರುತ್ತದೆ.
ಈ ಎರಡೂ ವಿಧದ ಲಕ್ವಾಗಳಲ್ಲಿ  ಮೆದುಳಿನ ಕೋಶಗಳು ಸತ್ತಿರುತ್ತವೆ. ಈ ರೀತಿಯ ಮೆದುಳಿನ ಹಾನಿಯ ಕಾರಣದಿಂದಾಗಿ ಒಬ್ಬ ವ್ಯಕ್ತಿಯಲ್ಲಿ  ಮಾತು, ಚಲನೆ ಮತ್ತು ನೆನಪುಗಳಂತಹ ಚಟುವಟಿಕೆಗಳ ಮೇಲೆ ನಿಯಂತ್ರಣ ತಪ್ಪಿ  ಹೋಗುತ್ತದೆ. ಹೃದಯಾಘಾತದಂತೆ ಮೆದುಳಿನ ಆಘಾತ ಕೂಡ ತುರ್ತುಸ್ಥಿತಿಯಾಗಿದ್ದು, ಚಿಕಿತ್ಸೆ ಎಷ್ಟು  ಬೇಗ ಸಿಗುತ್ತದೆಯೋ ಅಷ್ಟು  ಉತ್ತಮ.
ಮಿನಿ ಲಕ್ವಾ ಎಂದರೇನು ?

ಮಿನಿಲಕ್ವಾ (ಮಿನಿ ಸ್ಟ್ರೋಕ್‌) ಎಂಬುದು ಅಲ್ಪಕಾಲಿಕ ಐಷೆಮಿಕ್‌ ದಾಳಿ (ಟ್ರಾನ್ಸಿಯಂಟ್‌ ಐಷೆಮಿಕ್‌ ಅಟ್ಯಾಕ್‌ -TIA). ಇಂತಹ ಸ್ಥಿತಿ ಇರುವವರಲ್ಲಿ , ಸಣ್ಣ  ಅವಧಿಗೆ ಮೆದುಳಿಗೆ ರಕ್ತಸ್ರಾವ ಸ್ತಬ್ಧಗೊಂಡಿರುತ್ತದೆ.

ತಾತ್ಕಾಲಿಕವಾಗಿ ಲಕ್ವಾದ ಲಕ್ಷಣಗಳು (ಹೆಚ್ಚಾಗಿ ಕೆಲವು ನಿಮಿಷಗಳ ಅವಧಿಗೆ ಮಾತ್ರ) ಕಾಣಿಸಿಕೊಳ್ಳುವ ಸ್ಥಿತಿ ಇದು. ಅವರಲ್ಲಿ  ನಿಶ್ಶಕ್ತಿ, ಕೈ-ಕಾಲುಗಳಲ್ಲಿ  ಇರುವೆ ಹರಿದಾಡಿದಂತೆ ಅನುಭವ ಆಗುತ್ತದೆ.
ಲಕ್ವಾದ ಅಪಾಯ ಚಿಹ್ನೆಗಳು ಹೇಗೆ ತೋರಿಬರುತ್ತವೆ ?
ಈ ಕೆಳಗೆ ಹೇಳಲಾದ ಎಚ್ಚರಿಕೆಯ ಚಿಹ್ನೆಗಳು ಎಲ್ಲರಲ್ಲೂ  ಕಾಣಿಸಿಕೊಳ್ಳಬೇಕಾಗಿಲ್ಲ. ಕೆಲವೊಮ್ಮೆ  ಈ ಲಕ್ಷಣಗಳು ಬಂದುಹೋಗಬಹುದು. ಲಕ್ವಾ ಸಂಭವಿಸಿ ಒಂದು ತಾಸಿನ ಒಳಗೆ ಚಿಕಿತ್ಸೆ ದೊರೆಯುವಂತಾದರೆ, ಆಗ ಚಿಕಿತ್ಸೆ  ಬಹಳ ಪರಿಣಾಮಕಾರಿ ಆಗಬಲ್ಲದು.

ಹಾಗಾಗಿ, ಈ ಕೆಳಗಿನ ಯಾವುದೇ ಲಕ್ಷಣಗಳು ಇದ್ದರೂ, ವಿಳಂಬ ಮಾಡದೇ ತಕ್ಷಣ ವೈದ್ಯರ ಭೇಟಿ ಮಾಡಿ.
*ಹಠಾತ್‌ ಆಗಿ ಮುಖ, ತೋಳು ಅಥವಾ ಕಾಲುಗಳಲ್ಲಿ  ಮರಗಟ್ಟಿದಂತೆ ಅಥವಾ ನಿಶ್ಶಕ್ತಿ ಅನ್ನಿಸುವುದು, ವಿಶೇಷವಾಗಿ ದೇಹದ ಒಂದು ಮಗ್ಗುಲು.

*ಹಠಾತ್‌ ಆಗಿ ಗೊಂದಲ ಅಥವಾ ಮಾತನಾಡಲು, ಮಾತು ಅರ್ಥ ಮಾಡಿಕೊಳ್ಳಲು ತೊಂದರೆ.

*ಹಠಾತ್‌ ಆಗಿ ನಡೆದಾಡಲು ತೊಂದರೆ, ತಲೆ ಸುತ್ತು ಅಥವಾ ಸಂತುಲನ - ಸಂಯೋಜನೆ ನಷ್ಟ.

*ಅಕಾರಣವಾಗಿ ಹಠಾತ್‌ ತೀವ್ರ ತಲೆನೋವು, ಕಣ್ಣು  ಮಂಜಾಗುವುದು, ತಲೆಸುತ್ತು, ವಾಕರಿಕೆ ಅಥವಾ ವಾಂತಿ.
ಲಕ್ವಾದ ಪರಿಣಾಮಗಳೇನು ?
ಲಕ್ವಾ ಆದವರು ಸ್ವಲ್ಪ  ಪ್ರಮಾಣದಲ್ಲಿ  ಮೆದುಳಿನ ಹಾನಿ, ವೈಕಲ್ಯಗಳನ್ನು  ಅನುಭವಿಸಬಹುದು ಅಥವಾ ಸಕಾಲದಲ್ಲಿ  ಚಿಕಿತ್ಸೆ  ದೊರೆತರೆ, ಈ ಯಾವ ಲಕ್ಷಣಗಳೂ ಕಾಣಿಸದಿರಬಹುದು. ಆದರೆ ಹಲವು ಬಾರಿ, ಈ ಲಕ್ವಾ ತೀವ್ರವಾಗಿ ಮೆದುಳಿಗೆ ಹಾನಿ ಮಾಡಿದಲ್ಲಿ  ತೀವ್ರ ವೈಕಲ್ಯಗಳು ಸಂಭವಿಸಬಹುದು ಅಥವಾ ಅದು ಮರಣಾಂತಿಕವೂ ಆಗಬಹುದು.

ಇದು ಹೆಚ್ಚಾಗಿ ಮೆದುಳಿಗಾಗಿರುವ ಹಾನಿಯ ಪ್ರಮಾಣ ಹಾಗೂ ಹಾನಿ ಆಗಿರುವ ಭಾಗಗಳನ್ನು ಅವಲಂಬಿಸಿರುತ್ತದೆ.

ಲಕ್ವಾದಿಂದಾಗಿ ದೇಹದ ಒಂದು ಭಾಗದ ನಿಶ್ಶಕ್ತಿ (ಪಾರ್ಶ್ವವಾತ), ನೆನಪಿನ ತೊಂದರೆಗಳು, ಮೂಡ್‌ ಬದಲಾವಣೆಗಳು, ಮಾತಾಡಲು - ಮಾತನ್ನು ಅರ್ಥೈಸಿಕೊಳ್ಳಲು ತೊಂದರೆ, ಆಹಾರ ತಿನ್ನಲು - ನುಂಗಲು ತೊಂದರೆ, ನೋವು, ಖನ್ನತೆ ಮತ್ತಿತರ ಸಮಸ್ಯೆಗಳು ತಲೆದೋರಬಹುದು. ಪುನರುಜ್ಜೀವನ ಚಿಕಿತ್ಸೆ  ಹಾಗೂ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಲಕ್ವಾ ರೋಗಿಗಳು ಅದರ ಪ್ರಭಾವದಿಂದ ಮುಕ್ತರಾಗಲು ಪ್ರಯತ್ನಿಸಬಹುದು.
ಮೆದುಳಿನಲ್ಲಿ  ಎಲ್ಲೆಲ್ಲಿ  ಲಕ್ವಾ ಸಂಭವಿಸಬಹುದು ಮತ್ತು ಅದು ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?
ಮೆದುಳು ಸಂಕೀರ್ಣವಾದ ಅಂಗ. ಮೆದುಳಿನ ಪ್ರತಿಯೊಂದು ಭಾಗ ಕೂಡ ದೇಹದ ಒಂದು ನಿರ್ದಿಷ್ಟ  ಚಟುವಟಿಕೆಗೆ ಜವಾಬ್ದಾರ ಆಗಿರುತ್ತದೆ. ಮೆದುಳನ್ನು  ಸ್ಥೂಲವಾಗಿ  4 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಬಲಹೋಳು, ಎಡಹೋಳು, ಸೆರಬೆಲ್ಲಂ ಮತ್ತು ಮೆದುಳಿನ ಕಾಂಡ.

ಮೆದುಳಿನ ಬಲ ಹೋಳಿನಲ್ಲಿ  ಲಕ್ವಾ ಆದಾಗ, ದೇಹದ ಎಡಭಾಗದಲ್ಲಿ  ಪಾರ್ಶ್ವವಾತ ಉಂಟಾಗಬಹುದು. ಇದನ್ನು ಲೆಫ್ಟ್‌  ಹೆಮಿಪ್ಲೇಜಿಯಾ ಅನ್ನುತ್ತಾರೆ. ಇದಲ್ಲದೆ ಈ ಕೆಳಗಿನ ತೊಂದರೆಗಳು ಕಾಣಿಸಿಕೊಳ್ಳಬಹುದು.
*ಬೌದ್ಧಿಕ ಗೃಹಿಕೆಯ ತೊಂದರೆಗಳು: ಉದಾ: ಲಕ್ವಾ ಆಗಿ ಉಳಿದುಕೊಂಡಿರುವ ರೋಗಿಗೆ ದೂರವನ್ನು ಗೃಹಿಸಲಾಗದೇ ಅವರು ಬಿದ್ದು ಬಿಡಬಹುದು ಅಥವಾ ಕೈಯನ್ನು ಬಳಸಿ ಒಂದು ವಸ್ತುವನ್ನು ಹೆಕ್ಕಲು, ಹಿಡಿಯಲು ಸಾಧ್ಯವಾಗದಿರಬಹುದು.

*ನಿರ್ಧಾರ - ವರ್ತನೆಗಳಲ್ಲಿ  ತೊಂದರೆಗಳು: ಉದಾ : ಆ ವ್ಯಕ್ತಿ ತಾನು ಮಾಡಬಾರದ ಚಟುವಟಿಕೆಗಳಲ್ಲಿ  ತೊಡಗಬಹುದು - ವಾಹನ ಚಾಲನೆಯಂತಹವು.

*ಅಲ್ಪಕಾಲಿಕ ನೆನಪು : 
ಆ ವ್ಯಕ್ತಿಗೆ 30 ವರ್ಷಗಳ ಹಿಂದಿನ ಘಟನೆಯೊಂದು ನೆನಪಿಗೆ ಬರಬಹುದು; ಆದರೆ ಬೆಳಗ್ಗೆ ಚಹಾಕ್ಕೆ ಏನು ತಿಂದಿದ್ದೇವೆ ಎಂಬುದು ನೆನಪಿಲ್ಲದಿರಬಹುದು.
ಮೆದುಳಿನ ಎಡ ಹೋಳಿನಲ್ಲಿ  ಲಕ್ವಾ ಆದವರಿಗೆ ದೇಹದ ಬಲ ಭಾಗದಲ್ಲಿ  ಪಾರ್ಶ್ವವಾತ ಉಂಟಾಗಬಹುದು. ಇದನ್ನು ರೈಟ್‌ ಹೆಮಿಪ್ಲೇಜಿಯಾ ಎನ್ನುತ್ತಾರೆ. ಅಂತಹವರಿಗೆ ಈ ಕೆಳಗಿನ ತೊಂದರೆಗಳು ತಲೆದೋರಬಹುದು.

*ಮಾತನಾಡಲು ತೊಂದರೆ: ಭಾಷೆಯ ತೊಂದರೆ (ಅಫಾಸಿಯಾ)

* ನಿಧಾನದ - ಎಚ್ಚರಿಕೆಯ ವರ್ತನೆ. ಅವರಿಗೆ ಸಣ್ಣ  ಕೆಲಸಗಳನ್ನು ಪೂರೈಸುವುದಕ್ಕೂ ಸಾಕಷ್ಟು  ಸಹಾಯಬೇಕಾಗುತ್ತದೆ.

*ಬಲಭಾಗದ ಮೆದುಳಿನ ಲಕ್ವಾ ಆದವರಲ್ಲಿರುವಂತೆಯೇ ನೆನಪಿನ ತೊಂದರೆಗಳು. ಉದಾ : ಹೊಸ ಮಾಹಿತಿಗಳನ್ನು ಕಲಿಯಲು ಕಷ್ಟ  ಮತ್ತು ಅಲ್ಪಕಾಲಿಕ ನೆನಪು ಕಳಪೆ ಆಗಿರುವುದು.
ಸೆರಬೆಲ್ಲಂ ನಲ್ಲಿ ಲಕ್ವಾ ಆದಾಗ ಈ ಕೆಳಗಿನ ತೊಂದರೆಗಳು ಕಾಣಿಸಿಕೊಳ್ಳಬಹುದು.
*ತಲೆ ಮತ್ತು ಎದೆಯ ಭಾಗದಲ್ಲಿ  ಅಸಹಜ ಪ್ರತಿಕ್ರಿಯೆಗಳು.

*ಸಂಯೋಜನೆ - ಸಂತುಲನದ ತೊಂದರೆಗಳು

*ತಲೆಸುತ್ತು, ವಾಕರಿಕೆ ಮತ್ತು ವಾಂತಿ
ಮೆದುಳಿನ ಕಾಂಡದಲ್ಲಿ  ಕಾಣಿಸಿಕೊಳ್ಳುವ ಲಕ್ವಾಗಳು ಬಹಳ ವಿನಾಶಕಾರಿ. ಅದು ನಮ್ಮ  ದೇಹದ ಎಲ್ಲ  ಅನೈಚ್ಚಿಕ "ಜೀವನಾಧಾರ' ಚಟುವಟಿಕೆಗಳ ನಿಯಂತ್ರಣ ಕೇಂದ್ರ. ಉಸಿರಾಟ, ರಕ್ತದೊತ್ತಡ, ಎದೆಬಡಿತಗಳ ನಿಯಂತ್ರಣಕ್ಕೆ ಇದು ಕಾರಣ.

ಇದಲ್ಲದೆ ಕಣ್ಣಿನ ಚಲನೆಗಳು, ಶ್ರವಣಶಕ್ತಿ ಮತ್ತು ನುಂಗುವಿಕೆಗಳಿಗೂ ಈ ಭಾಗವೇ ಕಾರಣ. ಮೆದುಳಿನಲ್ಲಿ  ಹುಟ್ಟುವ ಎಲ್ಲ  ದೇಹ ಸಂಬಂಧಿ ಪ್ರೇರಣೆಗಳೂ, ಮೆದುಳಿನ ಕಾಂಡವನ್ನೇ ಹಾದು ಬರಬೇಕಾಗಿರುವುದರಿಂದ, ಅಂತಹ ರೋಗಿಗಳಲ್ಲಿ  ದೇಹದ ಎರಡೂ ಪಾರ್ಶ್ವಗಳು ನಿಷ್ಕ್ರಿಯಗೊಳ್ಳಬಹುದು.
ಲಕ್ವಾ ಪತ್ತೆ ಹೇಗೆ ?
ಲಕ್ವಾಕ್ಕೆ ಚಿಕಿತ್ಸೆ  ಆರಂಭಿಸುವ ಮುನ್ನ, ಅದನ್ನು ಖಚಿತವಾಗಿ ಪತ್ತೆಹಚ್ಚಬೇಕಾಗುತ್ತದೆ. ನಿಮ್ಮ ವೈದ್ಯರು ಈ ಕೆಲಸವನ್ನು ಮಾಡುತ್ತಾರೆ. ಲಕ್ವಾ ಆಗಿರುವ ರೋಗಿಗೆ ನರಸಂಬಂಧಿ ತಪಾಸಣೆಗಳು, ರಕ್ತ ತಪಾಸಣೆಗಳು ಹಾಗೂ ಎಲೆಕ್ಟ್ರೋಕಾರ್ಡಿಯೊಗ್ರಾಂ ತಪಾಸಣೆ ಅಗತ್ಯವಿರುತ್ತದೆ.

ಇದಲ್ಲದೆ ನಡೆಸಲಾಗುವ ಇತರ ತಪಾಸಣೆಗಳೆಂದರೆ :

*ಮೆದುಳಿನ ಸ್ಪಷ್ಟ  ಚಿತ್ರಣಕ್ಕಾಗಿ ಬಿಂಬ ತಪಾಸಣೆಗಳು ಅಗತ್ಯ. ಅದರಲ್ಲಿ  ಕಂಪ್ಯೂಟೆಡ್‌ ಟೊಮೊಗ್ರಫಿ ಸ್ಕ್ಯಾನ್‌(C.T.), ಮತ್ತು ಮ್ಯಾಗ್ನೆಟಿಕ್‌ ರೆಸೊನಾನ್ಸ್‌  ಸ್ಕ್ಯಾನಿಂಗ್‌ (MRI)ಗಳು ಸೇರಿವೆ.

ರಕ್ತ ಪ್ರವಾಹದಲ್ಲಿ  ಅಡ್ಡಿ ಅಥವಾ ಮೆದುಳಿನ ರಕ್ತ ಸ್ರಾವದಿಂದಾಗಿ ಲಕ್ವಾ ಆಗಿದ್ದರೆ, ಅದನ್ನು ಪತ್ತೆ ಹಚ್ಚುವಲ್ಲಿ  ಸಿ.ಟಿ. ಸ್ಕ್ಯಾನ್‌ ಬಹಳ ಉಪಯುಕ್ತ.

*ಇಇಜಿ  ( ಎಲೆಕ್ಟ್ರೋ ಎನ್ಸೆಫಾಲೊಗ್ರಾಂ) ನಂತಹ ವಿದ್ಯುದೀಯ ತಪಾಸಣೆಗಳು ಮತ್ತು ಪ್ರೇರಿತ ಪ್ರತಿಕ್ರಿಯೆ ತಪಾಸಣೆಗಳು ಮೆದುಳಿನ ವಿದ್ಯುದೀಯ ಚಟುವಟಿಕೆ ಹಾಗೂ ಗ್ರಹಿಕೆಯ ಪ್ರತಿಕ್ರಿಯೆಗಳ ಮೇಲೆ ಬೆಳಕು ಚೆಲ್ಲುತ್ತವೆ.

*ರಕ್ತದ ಹರಿವಿನ ತಪಾಸಣೆಗಾಗಿ ಡಾಪ್ಲರ್‌ ಅಲ್ಟ್ರಾಸೌಂಡ್‌ ತಪಾಸಣೆಗಳನ್ನು ನಡೆಸಿ, ಮೆದುಳಿನ ರಕ್ತಪ್ರವಾಹದಲ್ಲಿ  ಬದಲಾವಣೆಗಳು ಏನಾದರೂ ಇದ್ದಲ್ಲಿ, ಪತ್ತೆ ಹಚ್ಚಬಹುದು.
ಲಕ್ವಾಕ್ಕೆ ಚಿಕಿತ್ಸೆ  ಹೇಗೆ ?
ರಕ್ತ ಹೆಪ್ಪುಗಟ್ಟಿದ್ದರಿಂದಾದ ಲಕ್ವಾಗಳನ್ನು ಹೆಪ್ಪುಗಟ್ಟುವಿಕೆ ನಿವಾರಕ ಔಷಧಗಳಾದ ಟಿಷೂÂ ಪ್ಲಾಸ್ಮಿನೋಜೆನ್‌ ಆಯಕ್ಟಿವೇಟರ್‌ (TPA)ಬಳಸಿ ನಿವಾರಿಸಬಹುದು. ಈ ಔಷಧ ಪರಿಣಾಮಕಾರಿಯಾಗಿ ಕಾರ್ಯಾಚರಿಸಲು, ಲಕ್ವಾ ಆರಂಭವಾಗಿ ನಾಲ್ಕೂವರೆ ಗಂಟೆಗಳೊಳಗೆ ಇದನ್ನು ನೀಡಬೇಕು ಮತ್ತು ಅದಕ್ಕೆ ಮುನ್ನ ತಪಾಸಣೆಗಳನ್ನು ನಡೆಸಿರಬೇಕು.

ಹಾಗಾಗಿ, ಲಕ್ವಾ ಆಘಾತ ಆಗಿರುವ ವ್ಯಕ್ತಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು  ಬೇಗ ಆಸ್ಪತ್ರೆಗೆ ದಾಖಲಿಸುವುದು ಬಹಳ ಮುಖ್ಯವಾಗುತ್ತದೆ.

ಆರು ತಾಸುಗಳ ತನಕ ರಕ್ತನಾಳಗಳೊಳಗಿನ ಹೆಪ್ಪುಗಟ್ಟುವಿಕೆ ನಿವಾರಣೆ (ತ್ರಾಂಬಾಲಿಸಿಸ್‌) ಸಾಧ್ಯ. ಸೂಕ್ಷ್ಮವಾದ ಕ್ಯಾಥೆಟರ್‌ ನಳಿಕೆಯೊಂದನ್ನು ಕಾಲಿನ ರಕ್ತನಾಳದ ಮೂಲಕ ದೇಹದೊಳಗೆ ಕಳುಹಿಸಿ, ರೇಡಿಯಾಲಜಿಕಲ್‌ ಮಾರ್ಗದರ್ಶನದಲ್ಲಿ  (ಚಲನಶೀಲ ಕ್ಷ -ಕ್ಷಿರಣ ಬಿಂಬ) ರಕ್ತ ಹೆಪ್ಪುಗಟ್ಟಿರುವ ಮೆದುಳಿನ ರಕ್ತನಾಳದ ಭಾಗವನ್ನು ತಲುಪಲಾಗುತ್ತದೆ.

ಆ ಭಾಗಕ್ಕೆ ಖಕಅ ಔಷಧ ಅಲ್ಪ ಪ್ರಮಾಣದಲ್ಲಿ  ನೀಡಿದಾಗ, ಅಲ್ಲಿ  ಹೆಪ್ಪು  ಗಟ್ಟುವಿಕೆ ಕರಗುತ್ತದೆ. ಲಕ್ವಾ ಆಗಿ ಆರು ತಾಸುಗಳೊಳಗೆ ಈ ಪ್ರಕ್ರಿಯೆ ಸಾಧ್ಯ. ಇದಲ್ಲದೆ ಹೆಪ್ಪುಗಟ್ಟುವಿಕೆಯನ್ನು ಹೊರತೆಗೆಯುವ
ಪರಿಕರಗಳೂ ಲಭ್ಯ.(ಮೆಕ್ಯಾನಿಕಲ್‌ ತ್ರಾಂಬಾಲಿಸಿಸ್‌).

ಲಕ್ವಾ ಚಿಕಿತ್ಸೆ  ಮತ್ತು ಪ್ರತಿಬಂಧಕ್ಕಾಗಿ ಬೇರೆ ಔಷಧಗಳನ್ನು ನೀಡಲಾಗುತ್ತದೆ. ವಾರ್ಫಾರಿನ್‌ನಂತಹ ಹೆಪ್ಪುಗಟ್ಟುವಿಕೆ ನಿವಾರಕಗಳು, ಆಸ್ಪಿರಿನ್‌ನಂತಹ ರಕ್ತ ತೆಳುಕಾರಕಗಳು (ಆಯಂಟಿ ಪ್ಲೇಟ್ಲೆಟ್‌ ಏಜಂಟ್‌) ದೇಹದಲ್ಲಿ  ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಯ ಮೇಲೆ ಹಸ್ತಕ್ಷೇಪ ನಡೆಸಿ, ಲಕ್ವಾ ಪ್ರತಿಬಂಧದಲ್ಲಿ  ಪ್ರಮುಖ ಪಾತ್ರ ವಹಿಸಬಲ್ಲವು.

ಕೆಲವೊಮ್ಮೆ  ಲಕ್ವಾಕ್ಕೆ ಚಿಕಿತ್ಸೆ  ಅಥವಾ ಪ್ರತಿಬಂಧಕ ಚಿಕಿತ್ಸೆಯ ರೂಪದಲ್ಲಿ  ಶಸ್ತ್ರಕ್ರಿಯೆಯನ್ನೂ ಬಳಸಲಾಗುತ್ತದೆ. ಉದಾ : ಕ್ಯಾರೋಟಡ್‌ ಎಂಡಾರrರೆಕ್ಟಮಿ ಶಸ್ತ್ರಕ್ರಿಯೆಯಲ್ಲಿ, ಕ್ಯಾರೋಟಡ್‌ ಶುದ್ಧರಕ್ತನಾಳದಲ್ಲಿ , ಕುತ್ತಿಗೆಯ ಭಾಗದಲ್ಲಿ  ಶೇಖರವಾಗಿರುವ ಕೊಬ್ಬಿನ ಅಂಶಗಳನ್ನು ಶಸ್ತ್ರಕ್ರಿಯೆ ನಡೆಸಿ ತೆಗೆದುಹಾಕಲಾಗುತ್ತದೆ.

ಆ ಭಾಗದ ಕೊಬ್ಬಿನ ಅಂಶಗಳಿಂದಾಗಿ ಲಕ್ವಾದ ಸಾಧ್ಯತೆಗಳು ಹೆಚ್ಚು. ಹೆಮೊರೇಜಿಕ್‌ ಲಕ್ವಾ  ಇರುವವರಲ್ಲಿ, ಅನ್ಯೂರಿಸಂ ಅಥವಾ ಅಸಹಜವಾಗಿ ಉಬ್ಬಿರುವ ರಕ್ತನಾಳಗಳು ಒಡೆಯದಂತೆ ತಡೆಯುವುದಕ್ಕಾಗಿ ಕ್ಲಿಪ್‌ ತೊಡಿಸಲು ಶಸ್ತ್ರಕ್ರಿಯೆ ನಡೆಸಲಾಗುತ್ತದೆ.
ಲಕ್ವಾ  ರೋಗಿಗಳ ಪುನರುಜ್ಜೀವನ ಹೇಗೆ ?
ಲಕ್ವಾ  ಪೀಡಿತರಾಗಿ ಬದುಕುಳಿದವರಲ್ಲಿ, ಪುನರುಜ್ಜೀವನ ಬಹಳ ಮಹತ್ವದ ಅಂಶ. ಅಂತಹವರು ತಮ್ಮ ಬದುಕನ್ನು ಮರು ವ್ಯಾಖ್ಯಾನಿಸಿಕೊಂಡು ಬದುಕಲು ಕಲಿಯಬೇಕಾಗುತ್ತದೆ.

ಈ ಪುನರುಜ್ಜೀವನ ಕಾರ್ಯಕ್ರಮದ ಮುಖ್ಯ ಉದ್ದೇಶ, ರೋಗಿಗೆ ಸ್ವತಂತ್ರವಾಗಿ ಬದುಕಲು ಸಹಾಯ ಮಾಡುವುದು. ಈ ಕಾರ್ಯಕ್ರಮದಿಂದಾಗಿ ಲಕ್ವಾದ ಪರಿಣಾಮಗಳು ಯಾವುವೂ ಇಲ್ಲವಾಗಲಾರವು. ರೋಗಿಯ ಸಾಮರ್ಥ್ಯ, ಶಕ್ತಿ ಮತ್ತು ಆತ್ಮವಿಶ್ವಾಸಗಳನ್ನು ಮರುರೂಪಿಸುವುದೇ
ಇದರ ಮೂಲ ಉದ್ದೇಶ.

ಇದರಿಂದಾಗಿ ಲಕ್ವಾದ ಪರಿಣಾಮಗಳ ಹೊರತಾಗಿಯೂ ರೋಗಿ, ತನ್ನ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಈ ಪುನರುಜ್ಜೀವನ ಸೇವೆಗಳಲ್ಲಿ  ಈ ಕೆಳಗಿನ ಅಂಶಗಳು ಸೇರಿಸುತ್ತವೆ.
*ಚಲನೆ, ಸಂತುಲನ ಮತ್ತು ಸಂಯೋಜನೆಗಳು ಮರುಕಳಿಸುವಂತಾಗಲು ದೈಹಿಕ ತೆರಪಿ.

*ಸ್ನಾನ, ಬಟ್ಟೆ  ತೊಡುವಂತಹ ದಿನಚರಿಯ ಕೌಶಲಗಳನ್ನು ಕಲಿಯಲು ಆಕ್ಯುಪೇಷನಲ್‌ ತೆರಪಿ

*ಮಾತಿನ ತೆರಪಿ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಎಸ್‌.ಎನ್‌. ರಾವ್‌,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ನ್ಯುರಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.