Translate

ಮಂಗಳವಾರ, ಡಿಸೆಂಬರ್ 27, 2011

ಮೂಲವ್ಯಾಧಿ-ಪ್ರಾಚೀನ ಕಾಯಿಲೆ, ನೂತನ ಚಿಕಿತ್ಸೆ

ಡಾ| ಶಿವಾನಂದ ಪ್ರಭು, ಪ್ರೊಫೆಸರ್

ಸರ್ಜರಿ ವಿಭಾಗ, ಕೆ.ಎಂ.ಸಿ.ಅತ್ತಾವರ, ಮಂಗಳೂರು.
ಮೂಲವ್ಯಾಧಿಯೆಂಬುದು ಅನಾದಿ ಕಾಲದಿಂದಲೂ ಮಾನವನನ್ನು  ಸತಾಯಿಸುತ್ತಿರುವ ಕಾಯಿಲೆ. ಅತ್ತ ಸಹಿಸಿಕೊಳ್ಳಲೂ ಆಗದೆ, ಇತ್ತ ತೋರಿಸಿಕೊಳ್ಳಲೂ ಆಗದೆ ಯಾತನೆ ಪಡುವವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ.

ಹಿಂದಿನ ಕಾಲದಲ್ಲಿ  ಈ ಕಾಯಿಲೆಯ ಬಗೆಗಿನ ಅಜ್ಞಾನವೇ ಅಸಮರ್ಪಕ ಚಿಕಿತ್ಸೆಗೆ ಮೂಲಕಾರಣವಾಗಿದ್ದರೆ, ಇಂದು ಚಿಕಿತ್ಸೆಯ ಬಗೆಗಿನ ಹೆದರಿಕೆಯೇ  ರೋಗಿ ಹಿಂದೇಟು ಹಾಕುವಂತೆ ಮಾಡಿದೆ.

ಮೂಲವ್ಯಾಧಿ  ಎಂದರೆ, ಮಲದ್ವಾರದಲ್ಲಿನ ರಕ್ತನಾಳಗಳ ಉಬ್ಬುವಿಕೆ  ಎಂದು ಸ್ಥೂಲವಾಗಿ ಹೇಳಬಹುದು. ಅದಲ್ಲದೆ, ಈ ರಕ್ತನಾಳಗಳ ಆಧಾರವಾಗಿರುವ ಅಂಗಾಂಶಗಳು, ಕೂಡ ಶಿಥಿಲವಾಗುವುದರಿಂದ,
ರಕ್ತನಾಳಗಳು ಕೆಳಕ್ಕೆ ಜಾರುತ್ತವೆ. ಆ ಸಮಯದಲ್ಲಿ ಘಾಸಿಯಾಗಿ ರಕ್ತಸ್ರಾವವಾಗುತ್ತದೆ.

ರಕ್ತಸ್ರಾವವಿಲ್ಲದಿದ್ದರೂ, ರಕ್ತನಾಳಗಳಿಂದ ಕೂಡಿದ ಅಂಗಾಂಶ ಮಲದ್ವಾರದಿಂದ ಹೊರಕ್ಕೆ ಜಾರಿ, ಕಸಿವಿಸಿ ಉಂಟುಮಾಡುತ್ತದೆ. ಹೆಚ್ಚಿನ ಬಾರಿ ತಾನಾಗಿಯೇ ಒಳಗೆ ಹೋಗುವ ಈ ಅಂಗಾಂಶ (ಅಥವಾ ಮೂಲವ್ಯಾಧಿ), ಕೆಲವೊಮ್ಮೆ ಹೊರಗೆಯೇ ಉಳಿದು, ಅದನ್ನು ಒಳಗೆ ತಳ್ಳಬೇಕಾಗುವುದುಂಟು.

ಹೀಗಾದಾಗ ಅದು ಮೂಲವ್ಯಾಧಿಯ ಮುಂದುವರಿದ ಹಂತ ಎನ್ನಿಸಿಕೊಳ್ಳುತ್ತದೆ. ಪ್ರತಿದಿನ ಹೀಗಾಗುವಾಗ, ರೋಗಿ ಕ್ರಮೇಣ ಹತಾಶನಾಗುವುದು  ಸಹಜ.

ಮೂಲವ್ಯಾಧಿ ಇದೆ ಎಂದಾಕ್ಷಣ ಔಷಧಿಯೇ ಬೇಕೆಂದೇನೂ ಇಲ್ಲ. ಆರಂಭಿಕ ಹಂತದಲ್ಲಿ, ಆಹಾರದಲ್ಲಿ 
ಹೆಚ್ಚಿನ ಸೊಪ್ಪು  ತರಕಾರಿ ಅಳವಡಿಸಿಕೊಳ್ಳುವಿಕೆ, ಮಲ ಬಧœತೆಯಾಗದಂತೆ ಹೆಚ್ಚಿನ ದ್ರವ ಆಹಾರ, ಹಣ್ಣು ಹಂಪಲು ಸೇವಿಸುವುದು, ಆತಿಯಾದ ಮಾಂಸಹಾರ ವರ್ಜಿಸುವುದು... ಇತ್ಯಾದಿಗಳ‌ ಮೂಲಕ ಮೂಲವ್ಯಾಧಿಯನ್ನು  ಹದ್ದುಬಸ್ತಿನಲ್ಲಿ ಇಟ್ಟು ಕೊಳ್ಳಬಹುದು.

ರಕ್ತಸ್ರಾವ ಆಗಾಗ ಆಗುತ್ತಿದ್ದಲ್ಲಿ, ಔಷಧಿ ಸೇವನೆಗೆ ಸಲಹೆ ನೀಡಲಾಗುತ್ತದೆ. ಅದರ ಜೊತೆಗೆ, ಮಲದ್ವಾರಕ್ಕೆ ಹಚ್ಚಿಕೊಳ್ಳಲು ಮುಲಾಮು ಹಾಗೂ ಸೌಮ್ಯ ರೂಪದ ವಿರೇಚಕಗಳನ್ನು ನೀಡಲಾಗುತ್ತದೆ. ಆದರೆ ಔಷಧಿಗಳಿಂದ ರಕ್ತಸ್ರಾವ  ನಿಲ್ಲಬಹುದೇ ಹೊರತು, ಮೂಲವ್ಯಾಧಿ ಇಲ್ಲವಾಗುವುದಿಲ್ಲ  ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಆಹಾರದಲ್ಲಿನ ಕಟ್ಟು ನಿಟ್ಟನ್ನು ಸಡಿಲಿಸಿದಲ್ಲಿ, ಸಮಸ್ಯೆ ಮತ್ತೆ ಪ್ರತ್ಯಕ್ಷವಾಗುವುದು ಖಂಡಿತ. ಔಷಧಿಯಿಂದ ಪ್ರಯೋಜನವಾಗದಿದ್ದಲ್ಲಿ, ಅಥವಾ ಮೂಲವ್ಯಾಧಿ ದೇಹದಿಂದ ಕೆಳಕ್ಕೆ ಜಾರುವ ಹಂತ ತಲುಪಿದ್ದಲ್ಲಿ, ಆಗ ಶಸ್ತ್ರಚಿಕಿತ್ಸೆಯೇ  ದಾರಿ.

ಮೂಲವ್ಯಾಧಿಯ ಶಸ್ತ್ರಚಿಕಿತ್ಸೆೆÕಯಲ್ಲಿ , ಉಬ್ಬಿದ ರಕ್ತನಾಳಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ತೆಗೆಯಲಾಗುತ್ತದೆ. ಇದರಿಂದ ಮೂಲವ್ಯಾಧಿ ನಿರ್ಮೂಲವಾಗುತ್ತದೆ; ರೋಗಿಗೆ ಹೆಚ್ಚಿನ ನೋವು ಅನುಭವಕ್ಕೆ  ಬರುತ್ತದೆ.

ಶರೀರದ ಸೂಕ್ಷ್ಮ ಭಾಗದಲ್ಲಿನ ಗಾಯದ ನೋವು, ಆತಂಕದೊಡನೆ ಸೇರಿಕೊಂಡು ರೋಗಿಗೆ ಯಮಯಾತನೆ ಉಂಟು ಮಾಡುತ್ತದೆ. ಅದರಲ್ಲೂ, ಮಲವಿಸರ್ಜನೆ ಮಾಡುವಾಗ ನೋವು ಅಸಹನೀಯ ಅನ್ನಿಸುವುದುಂಟು;  ರಕ್ತಸ್ರಾವವೂ ಆಗಬಹುದು.

ಈ ನೋವಿನ ಭಯವೇ ಹಲವು ರೋಗಿಗಳು ಶಸ್ತ್ರಚಿಕಿತ್ಸೆಗೆ ಹಿಂಜರಿಯಲು ಕಾರಣ.

ಆದರೆ, ಈಗ ಶಸ್ತ್ರಚಿಕಿತ್ಸೆಯಲ್ಲಿ  ಹೊಸತೊಂದು ಆವಿಷ್ಕಾರವಾಗಿದೆ. ಅದೆಂದರೆ, ""ಸ್ಟೇಪ್ಲರ್‌ ' ಉಪಕರಣದ ಉಪಯೋಗದಿಂದ ಮಾಡುವ ಶಸ್ತ್ರಚಿಕಿತ್ಸೆ. ಇದರಿಂದ ಮಲದ್ವಾರದ ತೀರಾ ಒಳಗಣ ಭಾಗ ಕೊಲ್ಲಲ್ಪಡುತ್ತದೆ, ಮಲದ್ವಾರದ ಆ ಭಾಗಕ್ಕೆ ನೋವಿನ ಸಂವೇದನೆ ಅಷ್ಟಾಗಿ ಇಲ್ಲದೇ ಇರುವುದರಿಂದ, ನೋವು ಕಡಿಮೆಯಾಗಿರುತ್ತದೆ.

ರಕ್ತಸ್ರಾವದ ಸಾಧ್ಯತೆಯೂ ಅತಿ ಕಡಿಮೆ. ಹೆಚ್ಚಿನ ರೋಗಿಗಳು ಚಿಕಿತ್ಸೆಯ ಒಂದೆರಡು ದಿನಗಳಲ್ಲಿ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಬಹುದಾಗಿದೆ. ಬರಿಯ ಕೈಗಳಿಂದ ತಲುಪಲಾಗದ ಜಾಗದಲ್ಲಿ ಹೊಲಿಗೆಗಳು ಬೀಳುವುದರಿಂದ, ಈ ಶಸ್ತ್ರಚಿಕಿತ್ಸೆ ಸ್ಟೇಪ್ಲರ್‌ ಇಲ್ಲದೆ  ಅಸಾಧ್ಯ.

ಇಲ್ಲಿ ಮೂಲವ್ಯಾಧಿಯು ಕತ್ತರಿಸಲ್ಪಡುವುದಿಲ್ಲ, ಬದಲಾಗಿ ಒಳಕ್ಕೆ ಎಳೆಯಲ್ಪಡುತ್ತದೆ. ಇದ ರಿಂದಾಗಿ ಮಲವಿರ್ಸಜನೆ ಸುಲಲಿತವಾಗುತ್ತದೆ. ಈ ಸ್ಟೇಪ್ಲರ್‌ ಶಸ್ತ್ರಚಿಕಿತ್ಸೆಗೆ 'MIPH"  (Minimally Invasive Procedure for Haemorrhoids) ಎಂಬ ಅಂಗ್ಲ ಹೆಸರೂ  ಉಂಟು. ಹಳೆಯ ಮಾದರಿಯ ಶಸ್ತ್ರಚಿಕಿತ್ಸೆೆÕ ಪರಿಣಾಮಕಾರಿ  ಎಂಬುದರಲ್ಲಿ  ಎರಡುಮಾತಿಲ್ಲ .

ಆದರೆ, ಅದರಿಂದಾಗಿ ಉಂಟಾಗುವ ನೋವಿಗೆ  ಹೆದರುವುದರಿಂದ ಸ್ಟೇಪ್ಲರ್‌  ಮುಖಾಂತರ ಶಸ್ತ್ರಚಿಕಿತ್ಸೆ ಮಾಡಿಸು ವವರ ಸಂಖ್ಯೆ ಹೆಚ್ಚುತ್ತಿರುವುದು ಸತ್ಯ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಪಿ. ಸಂಪತ್‌ ಕುಮಾರ್‌, ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಸರ್ಜರಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ