Translate

ಬುಧವಾರ, ಡಿಸೆಂಬರ್ 21, 2011

ಸಿಫಿಲಿಸ್‌ ವಿರುದ್ಧ ಸುರಕ್ಷತಾ ಕ್ರಮಗಳು

ಡಾ| ಶ್ರೀಕರ ಮಲ್ಯ ಪಿ., ಪ್ರೊಫೆಸರ್‌ , ಮೈಕ್ರೋಲಾಜಿ ವಿಭಾಗ, ಕೆ.ಎಂ.ಸಿ. ಮಂಗಳೂರು.
ಸಿಫಿಲಿಸ್‌ ಕಾಯಿಲೆಯನ್ನು  ವಾಸಿ ಮಾಡಬಹುದು. ಆದರೆ, ಈ ಕಾಯಿಲೆಗೆ ಚಿಕಿತ್ಸೆ  ನೀಡದೆ ಹಾಗೆಯೇ ಬಿಟ್ಟರೆ, ಅದು ಆ ವ್ಯಕ್ತಿಯ ಸಾವಿಗೆ ಕಾರಣವಾಗುವ ಸಾಧ್ಯತೆಗಳೂ ಇವೆ. ಸಿಫಿಲಿಸ್‌ ಕಾರಣದಿಂದಾಗಿ ಹೃದಯ, ಪಿತ್ತಜನಕಾಂಗ ಹಾಗೂ ಮೆದುಳಿನ ಕಾಯಿಲೆಗಳೂ ಉಂಟಾಗಬಹುದು.
ತಿಳಿದಿರಬೇಕಾದ ವಿಚಾರಗಳು
*ಯಾವುದೇ ಲಕ್ಷಣಗಳನ್ನು ತೋರಿಸದೆ ದೇಹದೊಳಗೆ ದೀರ್ಘ‌ಕಾಲ ಬೆಳೆಯುವ ಈ ಸೋಂಕು, ಮೂರು ಹಂತಗಳಲ್ಲಿ  ಬೆಳವಣಿಗೆ ಹೊಂದುತ್ತದೆ.

*ಸಿಫಿಲಿಸ್‌ ಸೋಂಕಿನ ಮೊದಲ ಹಂತದಲ್ಲಿ  ಷ್ಯಾಂಕರ್‌(chancre) ಅಥವಾ ಹುಣ್ಣು ಅಥವಾ ಕಜ್ಜಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ನೋವು ರಹಿತವಾಗಿದ್ದರೂ, ಈ ಹುಣ್ಣಿನ  ಸೋಂಕು ತಾಗಿದ  ದೇಹದ ಇತರ ಭಾಗಗಳಿಗೂ ಇದು ಹರಡುತ್ತದೆ.

*ಜನನಾಂಗ ಅಥವಾ ಬಾಯಿಯ ಒಳಗೆ ಕಾಣಿಸಿಕೊಂಡ ಈ ಹುಣ್ಣುಗಳನ್ನು  ಸಾಮಾನ್ಯವಾಗಿ ಮೊಡವೆಗಳು, ಕೀಟದ ಕಡಿತ, ಸರ್ಪಸುತ್ತು ಅಥವಾ ಹರ್ಪಿಸ್‌,  ಗಾಯ... ಇತ್ಯಾದಿಗಳೆಂದು  ತಪ್ಪಾಗಿ ಗ್ರಹಿಸುವ ಸಾಧ್ಯತೆಗಳು ಹೆಚ್ಚು .

*ಸಿಫಿಲಿಸ್‌ ಸೋಂಕಿನ ಎರಡನೆಯ ಹಂತದಲ್ಲಿ , ತಲೆಕೂದಲು ಉದುರಿ ಬೋಳಾಗುತ್ತದೆ, ಕೈ ಅಥವಾ ಅಂಗೈಗಳಲ್ಲಿ, ಕಾಲಿನ ಹಿಮ್ಮಡಿಗಳಲ್ಲಿ  ಕೆಂಪನೆಯ  ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ಬಾಯಿ ಹಾಗೂ ಜನನಾಂಗಗಳ ಲೋಳೆಪೊರೆಯ ಮೇಲೆ ಕಾಣಿಸಿಕೊಳ್ಳುವ ಹಣ್ಣುಗಳು... ಈ ಎಲ್ಲ ಲಕ್ಷಣಗಳು ತಪಾಸಣೆಯ ಸಮಯದಲ್ಲಿ  ಪತ್ತೆಯಾಗುತ್ತವೆ.

*ಸಿಫಿಲಿಸ್‌ ಸೋಂಕಿನ ಕಾರಣದಿಂದ ಭ್ರೂಣದಲ್ಲಿರುವ ಶಿಶುವು ಸಾಯಬಹುದು ಆಥವಾ ಅದಕ್ಕೆ ಅಂಗವೈಕಲ್ಯವೂ  ಬರಬಹುದು.

*ಗೊನೋರಿಯಾ ಎಂಬ ಮತ್ತೂಂದು ಭಯಾನಕ ಬ್ಯಾಕ್ಟೀರಿಯಾ ಸೋಂಕಿಗೆ ರೋಗನಿರೋಧಕ ಚುಚ್ಚುಮದ್ದನ್ನು ತೆಗೆದು ಕೊಂಡಿದ್ದರೆ, ಆಗ ಸಿಫಿಲಿಸ್‌ ಸೋಂಕಿನ ಮೊದಲ  ಹಾಗೂ ಎರಡನೆಯ ಹಂತದ ಸೋಂಕು ಲಕ್ಷಣಗಳು ಮರೆಯಾಗಿರುವ ಸಾಧ್ಯತೆಗಳಿವೆ.

ಹಾಗಾಗಿ, ಇನ್ನಾವುದೇ ರೀತಿಯ  ಲೈಂಗಿಕ ಸೋಂಕುಗಳಿಗೆ ನೀವು ಪ್ರತಿರೋಧಕ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವಿರಾದರೆ, ಆಗ ನಿಮಗೆ ಸಿಫಿಲಿಸ್‌ ಸೋಂಕು  ಇಲ್ಲ  ಎನ್ನುವುದನ್ನು ರಕ್ತಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳುವುದು ಅತ್ಯಾವಶ್ಯಕ.

*ಒಂದು ವೇಳೆ ನೀವು  ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿರುವವರಾಗಿದ್ದರೆ, ಪ್ರತಿ ಆರು ತಿಂಗಳಿಗೊಮ್ಮೆ  VಈRಔ ರಕ್ತ ಪರೀಕ್ಷೆ  ಮಾಡಿಸಿಕೊಳ್ಳುವುದು ಆವಶ್ಯಕ.

*ಸಿಫಿಲಿಸ್‌ ಎಂಬುದು ಆರೋಗ್ಯ ಕಾರ್ಯಕರ್ತರ ಗಮನಕ್ಕೆ ತರಲೇಬೇಕಾದ ಲೈಂಗಿಕ ಸೋಂಕುಗಳಲ್ಲಿ  ಒಂದಾಗಿದೆ.

*ಸಿಫಿಲಿಸ್‌ ಎಂಬುದು ಮಾರಣಾಂತಿಕ ಕಾಯಿಲೆ ಆಗಿರುವ ಕಾರಣ, ಸೋಂಕು ಇರುವ ವ್ಯಕ್ತಿಯು ತನಗೆ ಇರುವ ಈ ಸೋಂಕಿನ ಬಗ್ಗೆ ತನ್ನ ಸಂಗಾತಿಗೆ ತಿಳಿಸಿರಬೇಕಾದುದು ಅತ್ಯಾವಶ್ಯಕ .
ಆದು  ಎಲ್ಲೆಲ್ಲ  ಹರಡಬಹುದು?

ಚರ್ಮದ ಮೇಲೆ ಇರುವ ಗಾಯದ ಮೂಲಕ ಸಿಫಿಲಿಸ್‌ ಹರಡುತ್ತದೆ. ಬಾಧಿತ ವ್ಯಕ್ತಿಯ ಹುಣ್ಣು ಆರೋಗ್ಯವಂತನ ದೇಹದ ಯಾವ ಭಾಗಕ್ಕೆ  ಸ್ಪರ್ಷವಾಗುತ್ತದೋ, ಆ ಭಾಗದಲ್ಲಿ  ಸಿಫಿಲಿಸ್‌ ಸೋಂಕಿನ ಮೊದಲ ಹುಣ್ಣು ಕಾಣಿಸಿಕೊಳ್ಳುತ್ತದೆ. ಟ್ರೆಪೋನೆಮಾ ಪಾಲ್ಲಿಡಂ (Treponema pallidum) ಇದು ಸಿಫಿಲಿಸ್‌ ಸೋಂಕಿಗೆ  ಕಾರಣವಾಗಿರುವ ರೋಗಾಣುವಿನ ಹೆಸರು.

ಚರ್ಮಕ್ಕಿಂತಲೂ  ಬಾಯಿ  ಹಾಗೂ ಜನನಾಂಗದ  ಲೋಳೆ ಪೊರೆಯು  ಈ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು . ಹಾಗಿದ್ದರೂ, ಈ ಸೋಂಕು ದೇಹದ ಯಾವ ಭಾಗದಲ್ಲಾದರೂ  ಕಾಣಿಸಿಕೊಳ್ಳಬಹುದು.
ವ್ಯಕ್ತಿಗೆ ಹೇಗೆ ಈ ಸೋಂಕು ತಗಲಬಹುದು?
ಸೋಂಕು ಇರುವ ಭಾಗದ ನೇರ ಸಂಪರ್ಕದಿಂದ, ವಿಶೇಷವಾಗಿ ಲೈಂಗಿಕ ಸಂಪರ್ಕದಿಂದ ಈ ಸೋಂಕು ತಗಲುತ್ತದೆ. ಒಣ ವಾತಾವರಣದಲ್ಲಿ  ಹಾಗೂ ಉಷ್ಣತೆಯ ಏರುಪೇರು  ಇರುವಲ್ಲಿ  ಈ ರೋಗಾಣುಗಳು ಹೆಚ್ಚು  ಕಾಲ ಬದುಕಲಾರವು.

ರಕ್ತವನ್ನು  ನಾಲ್ಕು ದಿನಗಳ ಕಾಲ ಶಿತಲೀಕರಣಗೊಳಿಸುವುದರಿಂದ  ಆ ರಕ್ತದಲ್ಲಿ  ಇದ್ದಿರಬಹುದಾದ ಟ್ರೆಪೋನಿಮಾ ರೋಗಾಣುವನ್ನು   ನಾಶಪಡಿಸಬಹುದು (ರಕ್ತಮರುಪೂರಣದ  ಸಂದರ್ಭದಲ್ಲಿ ರಕ್ತದ ಮೂಲಕ ಸಿಫಿಲಿಸ್‌ ಬರುವುದನ್ನು  ತಡೆಗಟ್ಟಲು).
ಸಿಫಿಲಿಸ್‌ ರೋಗಾಣು ಏನು ಮಾಡುತ್ತದೆ?
ರೋಗಾಣುವು ಚರ್ಮ ಅಥವಾ  ಲೋಳೆಪೊರೆಯ ಮೂಲಕ ದೇಹವನ್ನು ಪ್ರವೇಶಿಸಿ, ಬಹಳ ವೇಗದಲ್ಲಿ ದುಗ್ಧಗ್ರಂಥಿಗಳಿಗೆಲ್ಲಾ ಹರಡುತ್ತದೆ. ಈ ಸೋಂಕು ಬಾಧೆಯಾದ 10ರಿಂದ 90 ದಿನಗಳಲ್ಲಿ ರೋಗಾಣುವು ದೇಹವನ್ನು  ಪ್ರವೇಶಿಸಿದ ಭಾಗದಲ್ಲಿ  ಒಂದು ಹದಗಾತ್ರದ ನೋವು ರಹಿತ ಹುಣ್ಣು ಮೂಡುತ್ತದೆ. 

ಈ ಹುಣ್ಣು ಕ್ರಮೇಣ ತನ್ನಷ್ಟಕ್ಕೇ  ಮಾಯವಾಗಬಹುದು. ಎರಡನೆಯ ಹಂತದ ಸಿಫಿಲಿಸ್‌ನಲ್ಲಿ,  ಅಂಗೈ  ಹಾಗೂ ಕಾಲಿನ ಹಿಮ್ಮಡಿಗಳಲ್ಲಿ  ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಕಾನ್ಸಿಲೊಮ್ಯಾಟಾ ಎಂಬ ಹೆಸರಿನ  ಈ ಹುಣ್ಣು ಗಳು,  ಜನನಾಂಗ ಹಾಗೂ ಬಾಯಿಯ ಲೋಳೆಪೊರೆಯಲ್ಲಿಯೂ ಕಾಣಿಸಿಕೊಳ್ಳುತ್ತವೆ.

ಅವನ್ನು ಬಾಯಿಯ ಹುಣ್ಣುಗಳೆಂದು ತಪ್ಪು ತಿಳಿಯುವ ಸಾಧ್ಯತೆಗಳಿವೆ. ಈ ಹಂತದ ನಂತರ, ಕೆಲವು ವರ್ಷಗಳವರೆಗೆ ಸಿಫಿಲಿಸ್‌ ಗುಪ್ತವಾಗಿರಬಹುದು. ಸಿಫಿ ಲಿಸ್‌ನ 3ನೆಯ ಹಂತದಲ್ಲಿ ಹೃದಯ, ಮೆದುಳು, ನರವ್ಯೂಹವು ಹಾನಿಗೊಳಗಾಗುತ್ತದೆ.  ಈ ಹಂತದಲ್ಲಿ ಪ್ರತಿರೋಧಕ ಔಷಧೋಪಚಾರಗಳಿಂದ ಹೆಚ್ಚು  ಪ್ರಯೋಜನವಾಗಲಾರದು.

ಈ ಹಂತದಲ್ಲಿ  ದೇಹಕ್ಕೆ  ಈಗಾಗಲೇ ಆಗಿರುವ  ಹಾನಿಯನ್ನು  ಸರಿಪಡಿಸುವುದೂ ಅಸಾಧ್ಯ. ಮಾತ್ರವಲ್ಲ , ರೋಗಿಯು  ಮರಣ ಹೊಂದುವ ಸಾಧ್ಯತೆಗಳೂ ಇವೆ.
ಲಕ್ಷಣಗಳು
ಮೊದಲನೆಯ ಹಂತದ ಲಕ್ಷಣ (ಹುಣ್ಣು) ಸಂಪರ್ಕವಾದ 10 ರಿಂದ 90 ದಿನಗಳ ಒಳಗೆ ಕಾಣಿಸಿಕೊಳ್ಳುತ್ತದೆ (ಸರಾಸರಿ 3 ವಾರಗಳು). ಎರಡನೆಯ ಹಂತದ ಲಕ್ಷಣಗಳು ಸಂಪರ್ಕವಾದ 6 ವಾರಗಳಿಂದ 6 ತಿಂಗಳೊಳಗೆ ಕಾಣಿಸಿಕೊಳ್ಳುತ್ತವೆ (ಸರಾಸರಿ 8 ವಾರಗಳು).
ತಪಾಸಣೆಗಳು
ಸೂಕ್ಷ್ಮ ಜೀವಿ ವಿಜ್ಞಾನ ಪ್ರಯೋಗಾಲಯ ಅಥವಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಈ  ಸೋಂಕಿನ ತಪಾಸಣೆ ಮಾಡುತ್ತಾರೆ. ಹುಣ್ಣಿನ  ಸ್ರಾವಗಳನ್ನು ವಿಶೇಷವಾದ ಸೂಕ್ಷ್ಮ ದರ್ಶಕದ ಮೂಲಕ ಪರೀಕ್ಷಿಸುತ್ತಾರೆ.

ತಪಾಸಣೆಯಲ್ಲಿ  ನಿಖರತೆಯನ್ನು  ಪಡೆಯುವ  ಉದ್ದೇಶಕ್ಕಾಗಿ, ಹುಣ್ಣನ್ನು  ಪರೀಕ್ಷೆಗೆ ಮೊದಲು ತೊಳೆಯಬಾರದು ಅಥವಾ ಅಲ್ಲಿಗೆ ಔಷಧಿ ಹಚ್ಚಬಾರದು. ಬಾಯಿಯಲ್ಲಿನ ರೋಗಚಿಹ್ನೆಯನ್ನು  ಹೊರತುಪಡಿಸಿ, ಉಳಿದೆಡೆ ಡಾರ್ಕ್‌ಫೀಲ್ಡ್‌  ಪರೀಕ್ಷೆಯು ಮೊದಲ  ಹಂತದ ಸಿಫಿಲಿಸ್‌ನಲ್ಲಿ ಹೆಚ್ಚು  ನಿಖರವಾಗಿರುತ್ತದೆ.

ಈ ಹಂತದಲ್ಲಿ ರಕ್ತದ ಪರೀಕ್ಷೆಯ ಫಲಿತಾಂಶವು  ಮೂರನೇ ಒಂದು ಭಾಗದಷ್ಟು  ನಿಖರವಾಗಿರ ಬಹುದು. ಬಾಯಿಯಲ್ಲಿರುವ ರೋಗಚಿಹ್ನೆಯ ತಪಾಸಣೆ ಹಾಗೂ ರೋಗ ಎಷ್ಟರ ಮಟ್ಟಿಗೆ  ತ್ರೀವವಾಗಿದೆ ಎಂಬುದನ್ನು ಕಂಡುಕೊಳ್ಳಲು, ಈ ಹಂತದಲ್ಲಿ  ಒಂದು ರಕ್ತಪರೀಕ್ಷೆ  (VDRL) ಮಾಡಿಸಿಕೊಳ್ಳುವುದು ಆವಶ್ಯಕ.
ರಕ್ತ ಪರೀಕ್ಷೆ 
ಬಹಳ ಪ್ರಚಲಿತವಿರುವ ಹಾಗೂ ಪ್ರತಿಯೊಬ್ಬರೂ  ತಮ್ಮ ವಿವಾಹಕ್ಕೆ ಮೊದಲು ಮಾಡಿಸಿಕೊಳ್ಳಲೇಬೇಕಾದ  ರಕ್ತಪರೀಕ್ಷೆ- VDRL (ವೆನೆರಿಯಲ್‌ ಡಿಸೀಸ್‌ ರೀಸರ್ಚ್‌ ಲ್ಯಾಬೋರೆಟರಿ)  ಪರೀಕ್ಷೆ. ಈ ಪರೀಕ್ಷೆಯಿಂದ ದೇಹದಲ್ಲಿರುವ ರೋಗಕಾರಕ ಪ್ರತಿಕಾಯಗಳನ್ನು ಪತ್ತೆ ಮಾಡಬಹುದು.

ಲೆಪ್ರೊಮೋಟಸ್‌ ಲೆಪ್ರಸಿ, ರುಮೆಟಾಯಿಡ್‌  ಆಥೆìùಟಸ್‌ (ಮೂಳೆಗಳ ಸಂಧಿವಾತ), ಮಲೇರಿಯಾ ಹಾಗೂ ಹೆಪಾಟೈಟಿಸ್‌ ಸಂದರ್ಭಗಳಲ್ಲಿ ಈ ರಕ್ತಪರೀಕ್ಷೆಯ ವಿರುದ್ಧ  ಫ‌ಲಿತಾಂಶಗಳು ಬರುವುದಿದೆ. ಆದರೆ (VDRL) ರಕ್ತ ಪರೀಕ್ಷೆಯು ಇತರ ಪರೀಕ್ಷೆಗಳಿಗಿಂತ ಹೆಚ್ಚು  ಸರಳ , ಕಡಿಮೆ  ವೆಚ್ಚದಾಯಕ  ಎಂಬ  ಕಾರಣಕ್ಕಾಗಿ, ವೈದ್ಯರು ಇದನ್ನು ಮೊದಲು ಮಾಡಿಸಿಕೊಳ್ಳಲು ಸೂಚಿ ಸುತ್ತಾರೆ.

ಈ ರಕ್ತಪರೀಕ್ಷೆಯಲ್ಲಿ   ಸಿಫಿಲಿಸ್‌ ಸೋಂಕು ಇರುವುದು ಪತ್ತೆಯಾದರೆ, ಇದನ್ನು  ಖಚಿತಪಡಿಸಿಕೊಳ್ಳಲು ಪ್ರತ್ಯೇಕವಾದ  ಹೆಚ್ಚುವರಿ ಪರೀಕ್ಷೆಗಳನ್ನು ಸೂಚಿಸುತ್ತಾರೆ.
ಚಿಕಿತ್ಸೆ
ಪೆನ್ಸಿಲಿನ್‌  ಹಾಗೂ ಅದರ ಉತ್ಪನ್ನಗಳು ಹಾಗೂ ಇತರ ರೋಗಪ್ರತಿರೋಧಕಗಳಿಂದ ಸಿಫಿಲಿಸ್‌ಗೆ ಚಿಕಿತ್ಸೆ  ನೀಡುತ್ತಾರೆ. ಈ ಚಿಕಿತ್ಸೆಯನ್ನು  ಕೆಲವು ಅವಧಿಯವರೆಗೆ  ಕ್ರಮವಾಗಿ  ಮುಂದುವರಿಸುವುದು ಆವಶ್ಯಕ.

ಆರಂಭಿಕ  ಹಂತದಲ್ಲಿ ರುವ ಸಿಫಿಲಿಸ್‌ ಕಾಯಿಲೆಯನ್ನು  100% ಗುಣಪಡಿಸಬಹುದು. ರೋಗಿಯು ಗರ್ಭಧರಿಸಿದ್ದರೆ, ಆಗ ಎರಿತ್ರೋಮೈಸಿಸ್‌ನ್ನು ತೆಗೆದು ಕೊಳ್ಳುಬಹುದು. ಆದರೆ ಯಾವ  ಅವಧಿಯಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ವೈದ್ಯರು ಸೂಚಿಸುತ್ತಾರೆ.
ಸಂಪೂರ್ಣ ಗುಣವಾದ ಸೂಚನೆ
ನಿಮ್ಮ ಚಿಕಿತ್ಸೆಯು  ಸಂಪೂರ್ಣವಾದ ಒಂದೆರಡು ದಿನಗಳ ನಂತರ, ನಿಮ್ಮ ದೇಹದಲ್ಲಿ  ಸಿಫಿಲಿಸ್‌ ಸೋಂಕು ಇರದು. ನೀವು ಮತ್ತೆ ಯಾವಾಗ ಲೈಂಗಿಕ ಸಂಪರ್ಕವನ್ನು  ಆರಂಭಿಸಬಹುದು ಎಂಬ ಬಗ್ಗೆ ನಿಮ್ಮ  ವೈದ್ಯರಿಂದ ಸಲಹೆ ಪಡೆಯಿರಿ. ನೀವು ಚಿಕಿತ್ಸೆ ಪಡೆದರೂ ಸಹ, ರೋಗನಿರೋಧಕ ಔಷಧಿಗಳು ನಿಮ್ಮ  ರಕ್ತದಲ್ಲಿರುವ ರೋಗಾಣುಗಳನ್ನು ಸಂಪೂರ್ಣ ನಾಶಪಡಿಸಲು ಸಮಯ ಹಿಡಿಯಬಹುದು.

ಯಾವ ಪ್ರಮಾಣದಲ್ಲಿ ಸಿಫಿಲಿಸ್‌ ಉಪಶಮನವಾಗಿದೆ   ಎಂಬುದನ್ನು  ಖಚಿತ ಪಡಿಸಿಕೊಳ್ಳಲು -ನಿಮ್ಮ ವೈದ್ಯರ ಸಲಹೆಯ ಪ್ರಕಾರವೇ ಚಿಕಿತ್ಸೆಯ ನಂತರ ಮತ್ತೂಮ್ಮೆ ತಪಾಸಣೆ ಮಾಡಿಕೊಳ್ಳುವುದು ಅತಿ ಆವಶ್ಯಕ. ಚಿಕಿತ್ಸೆಯು  ಸಂಪೂರ್ಣ ಯಶಸ್ವಿಯಾಗಲು, ದೀರ್ಘ‌ಕಾಲ  ಚಿಕಿತ್ಸಾ ನಿಯಮಗಳನ್ನು ಅನುಸರಿಸುವುದು ಬಹಳ ಆವಶ್ಯಕ.
ಮಹಿಳೆಯರಿಗೆ ಅನ್ವಯವಾಗುವಂತೆ ಅರ್ಧಕ್ಕಿಂತಲೂ ಹೆಚ್ಚಿನ ಮಹಿಳೆಯರಲ್ಲಿ ಸಿಫಿಲಿಸ್‌ ಇದೆ ಎಂದು ಪತ್ತೆಯಾಗುವುದು, ರೋಗವು ಒಂದು ಹಾಗೂ ಎರಡನೆಯ ಹಂತಗಳನ್ನು  ದಾಟಿದ ನಂತರ. ಅವರಿಗೆ, ತಮಗೆ ಇಂತಹ ಕಾಯಿಲೆ ಇದೆ ಎಂಬ ಅರಿವೇ ಇರುವುದಿಲ್ಲ.  ಯಾಕೆಂದರೆ, ಅವರ ದೇಹದಲ್ಲಿ  ಅವರಿಗೆ  ಗೊತ್ತೇ ಆಗದಂತೆ,  ದೇಹದ ಆಳದಲ್ಲಿ  ಸಿಫಿಲಿಸ್‌ ಹುಣ್ಣು ಆಗಿರುತ್ತದೆ.
ಗರ್ಭಿಣಿ  ಮಹಿಳೆಗೆ ಅನ್ವಯಿಸುವಂತೆ ಗರ್ಭಿಣಿ ಮಹಿಳೆಗೆ ಸಿಫಿಲಿಸ್‌ ಇದ್ದು,  ಆಕೆಗೆ ನಾಲ್ಕು ತಿಂಗಳಿಗೆ ಮೊದಲೇ ಚಿಕಿತ್ಸೆ  ಆರಂಭಿಸಿದರೆ, ಶಿಶುವಿಗೆ ರೋಗ ಬಾಧಿಸದು. ಯಾಕೆಂದರೆ, ಈ ಅವಧಿಯಲ್ಲಿ ಟ್ರಿಪೋನಿಮ್‌ ರೋಗಾಣುವು ಪ್ಲಾಸೆಂಟಾ ಅಥವಾ ಹೊಕ್ಕುಳ ಬಳ್ಳಿಯ ತಡೆಯನ್ನು  ದಾಟಿ ಹೋಗಿರುವುದಿಲ್ಲ .

ಒಂದು ವೇಳೆ  ನಾಲ್ಕು  ತಿಂಗಳು ಕಳೆದಿದ್ದರೂ ಸಹ, ತಾಯಿಗೆ  ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಭ್ರೂಣದಲ್ಲಿಯೇ ಸುರಕ್ಷಿತ ಗೊಳಿಸಬಹುದು. ಆದರೆ, ಗರ್ಭವತಿ ಮಹಿಳೆಗೆ ಸಿಫಿಲಿಸ್‌ ಸೋಂಕು ಇದ್ದು, ಆಕೆಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಗರ್ಭಸ್ರಾವ, ಆವಧಿಗೆ ಮೊದಲೇ ಹೆರಿಗೆಯಾಗುವುದು, ನಿಶ್ಚೇತನ ಮಗುವಿನ ಜನನ, ನವಜಾತ  ಶಿಶುವಿನ ಮರಣ, ಮಗುವಿಗೆ ಜನ್ಮದತ್ತ ಅಂಗವೈಕಲ್ಯಗಳು... ಇತ್ಯಾದಿ ತೊಂದರೆಗಳು ಉಂಟಾಗಬಹುದು.

ಹಾಗಾಗಿ, ಪ್ರತಿಯೊಬ್ಬ ಮಹಿಳೆಯೂ  ಸಹ, ತಾನು ಗರ್ಭವತಿ ಎಂದು ತಿಳಿದ ತಕ್ಷಣವೇ, ರಕ್ತ  ಪರೀಕ್ಷೆ ಮಾಡಿಸಿಕೊಂಡು,  ತನಗೆ  ಸಿಫಿಲಿಸ್‌ ಇಲ್ಲ  ಎಂದು ಖಚಿತ ಪಡಿಸಿಕೊಳ್ಳುವುದು ಅತ್ಯವಶ್ಯಕ. ಇದರಿಂದ  ಗರ್ಭದಲ್ಲಿ  ಬೆಳೆಯುತ್ತಿರುವ ಭ್ರೂಣಕ್ಕೆ ಅಗಬಹುದಾದ  ಸರಿಪಡಿಸಲಾಗದ ತೊಂದರೆಗಳನ್ನು  ಕಡಿಮೆಗೊಳಿಸಬಹುದು.
ಪೋಷಕರಿಗೆ ಅನ್ವಯಿಸುವಂತೆಸಿಫಿಲಿಸ್‌ ಎಂಬುದು ಬಹಳ ಭಯಾನಕ  ಸ್ಥಿತಿ. ಬದುಕುಳಿದ  ಅರ್ಧದಷ್ಟು  ಮಕ್ಕಳಲ್ಲಿ  ಆರಂಭದ ಕೆಲವು ವಾರಗಳಲ್ಲೇ ಸಿಫಿಲಿಸಿನ ಲಕ್ಷಣಗಳು ಆರಂಭವಾಗುತ್ತವೆ.
ಸಲಿಂಗ ಕಾಮಿ ಪುರುಷರಿಗೆ ಅನ್ವಯಿಸುವಂತೆ ಸಲಿಂಗಕಾಮಿ  ಪುರುಷರಲ್ಲಿ ಇತ್ತೀಚೆಗೆ ಸಿಫಿಲಿಸ್‌ ಪ್ರಮಾಣವು  ಬಹಳಷ್ಟು  ಹೆಚ್ಚುತ್ತಿದೆ. ನಗರಪ್ರದೇಶಗಳಲ್ಲಿ  ಸುಮಾರು 60%ದಷ್ಟು  ಸಿಫಿಲಿಸ್‌  ಪ್ರಕರಣಗಳು ಹರಡಲು ಮುಖ್ಯ ವಾಹಕರಾಗಿರುವವರು ಸಲಿಂಗಕಾಮಿಗಳು.

ಹುಣ್ಣುಗಳು ಬಾಧಿತ ವ್ಯಕ್ತಿಯ ಬಾಯಿ ಅಥವಾ ಜನನಾಂಗದ ಭಾಗ ಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಕಾರಣದಿಂದಾಗಿ, ಸಾಮಾನ್ಯ ಮನುಷ್ಯ ರಿಗೆ  ತಮಗೆ ಇಂತಹ ಸೋಂಕು ತಗಲಿದೆ ಎಂಬ ಅರಿವೇ ಇರುವುದಿಲ್ಲ.
ರೋಗ ತಡೆಯುವ ಅಂಶಗಳು
ಇರುವ ರೋಗ ಪ್ರಕರಣಗಳಿಗೆ ಸರಿಯಾದ ಚಿಕಿತ್ಸೆ, ರೋಗಪ್ರಸರಣ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕಗಳನ್ನು ಸರಿಯಾಗಿ ನಿರ್ವಹಿಸುವುದು,ಸುರಕ್ಷಿತ  ಲೈಂಗಿಕ ಸಂಪರ್ಕ (ಕಾಂಡೋಮ್‌ಗಳ ಬಳಕೆ).
ಸಿಫಿಲಿಸ್‌ಗಿಂತಲೂ 40 ಪಟ್ಟು  ಹೆಚ್ಚು ಗೊನೋರಿಯಾ  ಬಾಧಿತರಿದ್ದಾರೆ. ಆದರೆ, ಮಹಿಳೆಯರಲ್ಲಿ  ಹೆಚ್ಚಾಗಿ ಗೊನೋರಿಯಾವು ಲಕ್ಷಣರಹಿತ  ಸೋಂಕಾಗಿರುತ್ತದೆ. ಹಾಗಿದ್ದರೂ, ಇದು ಇನ್ನೊಬ್ಬ ರಿಗೆ ಬಹಳ ಬೇಗನೆ  ಹರಡಬಲ್ಲದು.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ಚಿರಂಜಯ್‌ ಮುಖ್ಯೋಪಾದ್ಯಾಯ,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು, ಮೈಕ್ರೋಲಾಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ